ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಒಳಗೆ ಭಕ್ತರ ಸಂಖ್ಯೆಯನ್ನು 5,000ಕ್ಕೆ ಹೆಚ್ಚಳ ಮಾಡಿರುವ ರಾಜ್ಯ ಹೈಕೋರ್ಟ್ ಆದೇಶದ ವಿರುದ್ಧದ ಅರ್ಜಿಯನ್ನು ಕೂಡಲೇ ವಿಚಾರಣೆಗೆ ಒಳಪಡಿಸುವಂತೆ ಕೇರಳ ಸರ್ಕಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.
ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ ಕೇರಳದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯ ಹೆಚ್ಚಳಕ್ಕೆ ಅವಕಾಶ ನೀಡಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಕೇರಳ ಸರ್ಕಾರ ಹೇಳಿದೆ. ಕೇರಳ ಸರ್ಕಾರದ ಮನವಿ ಕುರಿತಂತೆ ಸುಪ್ರೀಂಕೋರ್ಟ್ ಕೂಡಲೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಕ್ತರ ಸಂಖ್ಯೆಯ ಏರಿಕೆಯ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕೇರಳ ಸರ್ಕಾರದ ಅರ್ಜಿಯಲ್ಲಿ ನಾಲ್ಕು ತಪ್ಪುಗಳು ಇದ್ದು, ಅವುಗಳನ್ನು ಸರಿಪಡಿಸುವಂತೆ ಸುಪ್ರೀಂಕೋರ್ಟ್ ರಿಜಿಸ್ಟ್ರಿ ಸೂಚನೆ ನೀಡಿತ್ತು. ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ತಿದ್ದಿದ್ದರೂ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜೆಗಳ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಗೆ ಬಂದಿರಲಿಲ್ಲ.
ಜನವರಿ 5ರಂದು ಅಹವಾಲು ಮಂಡಿಸಲು ಕೇರಳಕ್ಕೆ ಅವಕಾಶ ನೀಡಲಾಗಿತ್ತು. ಬಳಿಕ ಅರ್ಜಿಯನ್ನು ಕೂಡಲೇ ವಿಚಾರಣೆಗೆ ಎತ್ತಿಕೊಳ್ಳುವಂತೆ ಸರ್ಕಾರದ ಪರ ಜಿ ಪ್ರಕಾಶ್ ಅವರು ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದರು.
ಡಿಸೆಂಬರ್ 30ರಂದು ಮಕರವಿಳಕ್ಕು ಅವಧಿಯಲ್ಲಿ ಪ್ರತಿದಿನ 5,000 ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 250 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹೆಚ್ಚಿನವರು ಶಬರಿಮಲೆ ದೇವಸ್ಥಾನ ಸಿಬ್ಬಂದಿ ಮತ್ತು ಭಕ್ತರು ಇದ್ದಾರೆ. ಹೈಕೋರ್ಟ್ ಆದೇಶ ನೀಡುವಾಗ ಇದನ್ನೆಲ್ಲ ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ಷೇಪಿಸಿರುವ ಸರ್ಕಾರ, ಕೂಡಲೇ ತಡೆಯಾಜ್ಞೆ ನೀಡುವಂತೆ ಕೋರಿದೆ.