ಮೆಕ್ಸಿಕೋ: ಕೋವಿಡ್ ಲಸಿಕೆ ಪಡೆದಿದ್ದ ವೈದ್ಯನೋರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಜಗತ್ತಿನ ಕೋವಿಡ್ ಲಸಿಕೆಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫೈಜರ್ ಸಂಸ್ಥೆಯ ಲಸಿಕೆ ಪಡೆದ ಮೆಕ್ಸಿಕೊದ ವೈದ್ಯರ ಸ್ಥಿತಿ ಗಂಭೀರವಾಗಿದ್ದು. ಉಸಿರಾಟದ ತೊಂದರೆ ಮತ್ತು ಎನ್ಸೆಫಲೋಮೈಲಿಟಿಸ್ (ತೀವ್ರವಾದ ವೈರಸ್ ಸೋಂಕಿನಿಂದಾಗಿ ಮೆದುಳು ಮತ್ತು ಬೆನ್ನುಹುರಿಯ ಉರಿಯೂತ) ಬಳಲುತ್ತಿದ್ದ ಅವರನ್ನು ತೀವ್ರನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೆಕ್ಸಿಕೋ ಆರೋಗ್ಯ ಸಚಿವಾಲಯ ತಿಳಿಸಿದೆ.
ಫೈಜರ್ ಕೋವಿಡ್ ಲಸಿಕೆ ಪಡೆದ 32 ವರ್ಷದ ವೈದ್ಯರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಲಸಿಕೆ ಪಡೆದ ನಂತರ ಅರ್ಧಗಂಟೆಯೊಳಗೆ ವೈದ್ಯರಲ್ಲಿ ಚರ್ಮದ ದದ್ದುಗಳು, ಸ್ನಾಯು ಸೆಳೆತ, ಸ್ನಾಯು ದೌರ್ಬಲ್ಯ ಮತ್ತು ಉಸಿರಾಟದ ತೊಂದರೆಗಳು ಕಂಡುಬಂದಿದೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಅವರನ್ನು ತೀವ್ರ ನಿಗಾಘಟಕಕ್ಕೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಲಸಿಕೆ ಪಡೆದ ವೈದ್ಯರಿಗೆ ಔಷಧಿಗಳ ಅಲರ್ಜಿ ಇದ್ದು, ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಔಷಧ ಅಲರ್ಜಿಗೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.