ಭೋಪಾಲ್: ಶನಿವಾರ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದ ಮಧ್ಯಪ್ರದೇಶದ ಉಜೈನಿ ಜಿಲ್ಲೆಯ ಮೂವರು ನರ್ಸ್ ಗಳಿಗೆ ಜ್ವರ, ತಲೆನೋವು ,ಸುಸ್ತು ವಾಕರಿಕೆ ಸಮಸ್ಯೆ ಕಾಣಿಸಿಕೊಂಡು ಭಾನುವಾರ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
25 ವರ್ಷದ ಮೂವರು ನರ್ಸ್ ಗಳು ಶನಿವಾರ ಕೋವಿಡ್ -19 ಲಸಿಕೆ ಪಡೆದುಕೊಂಡಿದ್ದರು ಎಂದು ಉಜೈನಿಯ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಬಾಲ್ಗಟ್ ಮತ್ತು ಬೆತೂಲ್ ಜಿಲ್ಲೆಯಿಂದ ಬಂದಿದ್ದ ಯುವ ನರ್ಸ್ ಗಳಿಗೆ ಭಾನುವಾರ ಬೆಳಗ್ಗೆ ಜ್ವರ, ತಲೆನೋವು, ಸುಸ್ತು ಆರಂಭವಾಗಿದೆ.
ಮೂವರು ನರ್ಸ್ ಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ನಿಗಾವಣೆಯಲ್ಲಿ ಇಡಲಾಗಿತ್ತು.ಇದೀಗ ಎಲ್ಲರೂ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಉಜೈನಿ ಮುಖ್ಯ ಆರೋಗ್ಯಾಧಿಕಾರಿ ಡಾ. ಮಹಾವೀರ್ ಖಂಡೇಲ್ವಾಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.