ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ಜಾರಿಯನ್ನು ತಡೆಹಿಡಿದಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಚರ್ಚೆ ನಡೆಸಲು ಸಮಿತಿಯೊಂದನ್ನು ರಚಿಸಿರುವುದಾಗಿ ಪ್ರಕಟಿಸಿದೆ. ಆದರೆ, ಈ ಸಮಿತಿ ಕೇಂದ್ರ ಸರ್ಕಾರದ ಪರವಾಗಿದ್ದು, ನಾವು ಯಾವುದೇ ಸಮಿತಿಯಲ್ಲೂ ಸೇರುವುದಿಲ್ಲ ಎಂದು ಪ್ರತಿಭಟನಾನಿರತ ರೈತ ಸಂಘಟನೆಗಳು ಹೇಳಿವೆ.
ಸುಪ್ರೀಂ ಕೋರ್ಟ್ ತೀರ್ಪನ್ನು ರೈತರು ಹಾಗೂ ರೈತ ಸಂಘಟನೆಗಳು ಸಂಪೂರ್ಣವಾಗಿ ಒಪ್ಪಿಲ್ಲ, ತಾವು ಯಾವುದೇ ಸಮಿತಿಯಲ್ಲಿ ಸೇರುವುದಿಲ್ಲ ಎಂದು ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.ಇದಲ್ಲದೆ, ತಾವು ಕಳೆದ ಕೆಲವು ದಿನಗಳಿಂದ ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದ್ದಾರೆ. ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಜತೆಗೆ, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸುವ ಭರವಸೆ ಹೊರತುಪಡಿಸಿ ಯಾವುದೇ ಪ್ರಸ್ತಾಪವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ರೈತರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.ಕೃಷಿ ಕಾಯ್ದೆಗಳ ವಿವಾದದ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಪ್ರಕಟಿಸಿರುವ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಎಂದು ರೈತರು ಆರೋಪಿಸಿದ್ದಾರೆ.ಕೇಂದ್ರ ಸರ್ಕಾರ ತನ್ನ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಮೂಲಕ ಸಮಿತಿ ಮಾಡಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ. ಸಮಿತಿಯೊಂದನ್ನು ರಚಿಸುವ ವಿಷಯವನ್ನು ಕೇಂದ್ರ ಸರ್ಕಾರ ಈ ಹಿಂದೆ ಹಲವು ಬಾರಿ ಹೇಳಿತ್ತು ಎಂದು ಅವರು ಸ್ಮರಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಮಾಡಿದ್ದು, ಅದರಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವುದಾಗಿ ರೈತರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿರುವ ಯಾವುದೇ ಸಮಿತಿಯನ್ನು ನಾವು ಅನುಮೋದಿಸುವುದಿಲ್ಲ, ಸಮಿತಿಯಲ್ಲಿ ಸೇರ್ಪಡೆಗೊಳ್ಳುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.
ಕೃಷಿ ಕಾಯ್ದೆಗಳ ಬಗ್ಗೆ ಎರಡು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆ ಇನ್ನೂ ಮುಂದೆಯೂ ನಿಲ್ಲುವುದಿಲ್ಲ ಎಂದು ಎಂದು ಭಾರತೀಯ ಕಿಸಾನ್ ಯೂನಿಯನ್(ರಿ) ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಸ್ಪಷ್ಟಪಡಿಸಿದ್ದಾರೆ.
"ನಾವು ಯಾವುದೇ ಸಮಿತಿಯನ್ನು ಸೇರುವುದಿಲ್ಲ ಎಂದು ಈಗಾಗಲೇ ಹೇಳಿದ್ದೇವೆ. ಸಮಿತಿಯಲ್ಲಿರುವ ಎಲ್ಲ ಸದಸ್ಯರು ಕೇಂದ್ರ ಸರ್ಕಾರದ ಪರವಾಗಿರುವ ವ್ಯಕ್ತಿಗಳಾಗಿದ್ದು, ರೈತರನ್ನು ಬೆಂಬಲಿಸುವವರು ಯಾರೂ ಇಲ್ಲ ಎಂದು ಬಲ್ಬೀರ್ ಟೀಕಿಸಿದ್ದಾರೆ.