ತಿರುವನಂತಪುರ: ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯದಲ್ಲಿ ಎಲ್ಲೆಡೆ ನಿನ್ನೆ ಸಂಭ್ರಮದ ಕಾರ್ಯಕ್ರಮಗಳು ಕೋವಿಡ್ ವ್ಯಾಪಕತೆಯ ಮಧ್ಯೆ ಸರಳವಾಗಿ ನೆರವೇರಿತು. ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಾಷ್ಟ್ರಧ್ವಜಾರೋಹಣಗೈದರು. ಈ ಬಾರಿ ವಾಯುಪಡೆಯ ಹೆಲಿಕಾಪ್ಟರ್‍ಗಳು ಪೂರ್ಣವಾಗಿ ಪಾಲ್ಗೊಂಡಿದ್ದವು.
ರಾಜ್ಯಪಾಲರು ತಮ್ಮ ಗಣರಾಜ್ಯೋತ್ಸವದ ಸಂದೇಶದಲ್ಲಿ, ವಸುದೈವ ಕುಟುಂಬಕಂ ಎಂಬ ಭಾರತೀಯ ಸಂಪ್ರದಾಯವನ್ನು ಪುಷ್ಠೀಕರಿಸಲೋ ಎಂಬಂತೆ ಭಾರತವು ವಿಶ್ವದ ಔಷಧಾಲಯವಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಪ್ರಧಾನಮಂತ್ರಿಯ ಆತ್ಮನಿರ್ಭರ ಭಾರತ್ ಯೋಜನೆಯನ್ನು ಶ್ಲಾಘಿಸಿದ ರಾಜ್ಯಪಾಲರು, ಕರೋನಾ ಯುಗದಲ್ಲಿ ಗಾಂಧಿವಾದಿ ತತ್ತ್ವಶಾಸ್ತ್ರದ ಭಾಗವಾದ ಗ್ರಾಮ ಸ್ವರಾಜ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಆತ್ಮನಿರ್ಭರ್ ಸಮರ್ಥವಾಗಿದೆ ಎಂದು ಹೇಳಿದರು.
ಗಣರಾಜ್ಯೋತ್ಸವ ಆಚರಣೆಗಳು ಕರೋನಾ ಮಾನದಂಡಗಳಂತೆ ನಡೆಯಿತು. ಸಮಾರಂಭಕ್ಕೆ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಪ್ರವೇಶವಿರಲಿಲ್ಲ. ವಿವಿಧ ಭದ್ರತಾ ಪಡೆಗಳ ಜೊತೆಗೆ, ಎನ್‍ಸಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.