ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ವಿರುದ್ಧದ ಮೊದಲ ಹಂತದ ಲಸಿಕೆ ಅಭಿಯಾನ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದ್ದು, ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ನ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯಲ್ಲಿ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಗಂಭೀರ ಅಡ್ಡ ಪರಿಣಾಮ ಬೀರಿಲ್ಲ ಎಂದು ದಿ ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳ ಜರ್ನಲ್ ನಲ್ಲಿ ಪ್ರಕಟವಾದ ಫಲಿತಾಂಶಗಳಿಂದ ಸ್ಪಷ್ಟವಾಗಿದೆ.
ಕೋವಾಕ್ಸಿನ್ ಪ್ರಾಯೋಗಿಕ ಪರೀಕ್ಷೆಯ ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸಿದೆ ಎಂದು ದಿ ಲ್ಯಾನ್ಸೆಟ್ ತಿಳಿಸಿದೆ.
ಈಗ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿರುವ ಕೋವ್ಯಾಕ್ಸಿನ್ ಗೆ ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದ್ದು, ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಲಸಿಕೆ ಸುರಕ್ಷಿತವಾಗಿದ್ದು, ಲಸಿಕೆ-ಸಂಬಂಧಿತ ಗಂಭೀರ ಅಡ್ಡ ಪರಿಣಾಮಗಳು ಬೀರಿಲ್ಲ ಎಂದು ಭಾರತ್ ಬಯೋಟೆಕ್ ನೆರವಿನಿಂದ ನಡೆದ ಅಧ್ಯಯನದ ಲೇಖಕರು ಉಲ್ಲೇಖಿಸಿದ್ದಾರೆ.
ಎಲ್ಲಾ ಅಡ್ಡ ಪರಿಣಾಮಗಳು ಸೌಮ್ಯ ಮತ್ತು ಮಧ್ಯಮವಾಗಿವೆ ಯಾವುದೂ ಗಂಭೀರವಾಗಿಲ್ಲ. ಮೊದಲ ಡೋಸ್ ನಂತರ ಒಂದು ಅಡ್ಡ ಪರಿಣಾಮ ಬೀರಿದ ಘಟನೆ ವರದಿಯಾಗಿದೆ. ಆದರೆ ಅದು ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ಲೇಖಕರು ಹೇಳಿದ್ದಾರೆ.