ನವದೆಹಲಿ: 'ಕೊರೊನಾವೈರಸ್ ವಿರುದ್ಧ ಹೋರಾಡಲು ವಿಶ್ವದ ಬೃಹತ್ ಲಸಿಕಾ ಅಭಿಯಾನವೊಂದು ಭಾರತದಲ್ಲಿ ಆರಂಭವಾಗಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೋಮವಾರ ನಡೆದ ರಾಷ್ಟ್ರೀಯ ಮಾಪನಶಾಸ್ತ್ರ ಸಮಾವೇಶದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಭಾರತದಲ್ಲಿ ಆರಂಭವಾಗಲಿರುವ ಬೃಹತ್ ಲಸಿಕೆ ಅಭಿಯಾನಕ್ಕೆ ಕೊಡುಗೆ ನೀಡಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. 'ನಿಮ್ಮ ಕೊಡುಗೆ ಬಗ್ಗೆ ದೇಶವೇ ಹೆಮ್ಮೆ ಪಡಲಿದೆ' ಎಂದು ಹೇಳಿದರು.
'ಭಾರತದಲ್ಲಿ ತಯಾರಾಗುವ ಉತ್ಪನ್ನಗಳಿಗೆ (ಮೇಡ್ ಇನ್ ಇಂಡಿಯಾ) ವಿಶ್ವಮಟ್ಟದಲ್ಲಿ ಬೇಡಿಕೆ ಇರುವ ಜತೆಗೆ, ಜಾಗತಿಕವಾಗಿಯೂ ಮನ್ನಣೆ ದೊರೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ' ಎಂದು ಅವರು ಹೇಳಿದರು. 'ನಮ್ಮ ದೇಶದಲ್ಲಿ ತಯಾರಾಗುವ ಉತ್ಪನ್ನಗಳ ಪ್ರಮಾಣದ ಜತೆಗೆ, ಗುಣಮಟ್ಟಕ್ಕೂ ಆದ್ಯತೆ ನೀಡಬೇಕು' ಎಂದು ಸಲಹೆ ನೀಡಿದರು.
ಆಕ್ಸ್‌ಫರ್ಡ್ ವಿವಿ ಸಹಯೋಗದೊಂದಿಗೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆ ಮತ್ತು ಭಾರತ್ ಬಯೋಟೆಕ್‌ನ 'ಕೋವಾಕ್ಸಿನ್' ಲಸಿಕೆಯನ್ನು ತುರ್ತು ಉದ್ದೇಶಕ್ಕಾಗಿ ಬಳಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಭಾನುವಾರ ಅನುಮತಿ ನೀಡಿದೆ. ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರತೆ ಒಂದು ದಿನದ ನಂತರ ಪ್ರಧಾನಿ ಮೋದಿ ಅವರು, ದೇಶದಲ್ಲಿ ಬೃಹತ್ ಲಸಿಕೆ ಅಭಿಯಾದ ಕುರಿತು ಹೇಳಿಕೆ ನೀಡಿದ್ದಾರೆ.