ನವದೆಹಲಿ: 'ಕೋವಿಡ್ 19' ಸಾಂಕ್ರಾಮಿಕದ ಅವಧಿಯಲ್ಲಿ ಕೈತೊಳೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಮಕ್ಕಳ ಕಾಳಜಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿ ಪುರಸ್ಕೃತ 32 ಮಕ್ಕಳೊಂದಿಗೆ ನಡೆಸಿದ ಸಂವಾದದಲ್ಲಿ ಪ್ರಧಾನಿಯವರು ಪ್ರಶಸ್ತಿ ಪುರಸ್ಕೃತರನ್ನು ಶ್ಲಾಘಿಸಿದರು. 'ಪ್ರಶಸ್ತಿ ಪಡೆದಿರುವ ಮಕ್ಕಳು ಎಂದಿಗೂ ತಾವು ಮಾಡುತ್ತಿರುವ ಇಂಥ ಕಾರ್ಯಗಳನ್ನು ನಿಲ್ಲಿಸಬಾರದು' ಎಂದು ಕಿವಿ ಮಾತು ಹೇಳಿದರು.
ದೇಶಕ್ಕಾಗಿ ಕೆಲಸ ಮಾಡುವಂತೆ ಮಕ್ಕಳಿಗೆ ತಿಳಿಸಿದ ಪ್ರಧಾನಿಯವರು, 75 ನೇ ಸ್ವಾತಂತ್ರ್ಯೋತ್ಸವ ಸಮೀಪಿಸು ತ್ತಿದ್ದು, ಈ ಸಂದರ್ಭದಲ್ಲಿ ನೀವೆಲ್ಲ ಯಾವ ರೀತಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಯೋಚಿಸುವಂತೆ ಪ್ರಧಾನಿ ಮಕ್ಕಳಿಗೆ ತಿಳಿಸಿದರು.
ಮಹಾನ್ ನಾಯಕರ ಜೀವನ ಚರಿತ್ರೆಗಳನ್ನು ಓದಲು ಹೇಳಿದ ಪ್ರಧಾನಿಯವರು, ಆ ಚರಿತ್ರೆಗಳು ಜೀವನಕ್ಕೆ ಸ್ಪೂರ್ತಿ ನೀಡುತ್ತವೆ ಎಂದರು.
ಇದೇ ವೇಳೆ ಕೃಷಿ ಉಪಕರಣಗಳನ್ನು ತಯಾರಿಸಿ, ಬಾಲಪುರಸ್ಕಾರಕ್ಕೆ ಆಯ್ಕೆಯಾದ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಾಲಕ ಕೆ.ರಾಕೇಶ್ ಕೃಷ್ಣ ಪ್ರಧಾನಿ ಮಾತನಾಡಿದರು. 'ಆಧುನಿಕ ಕೃಷಿಯು ದೇಶಕ್ಕೆ ಅವಶ್ಯಕತೆಯಾಗಿದೆ' ಎಂದರು.
'ಸ್ವಚ್ ಭಾರತ್' ಕಾರ್ಯಕ್ರಮದ ಅಂಗವಾಗಿ ಮಕ್ಕಳು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದರು.