ಭೋಪಾಲ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ 1,11,111 ರೂಪಾಯಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗೆ ಸೋಮವಾರ ದೇಣಿಗೆ ನೀಡಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಸಂದರ್ಭ ಶಾಂತಿ ಕಾಪಾಡಿಕೊಳ್ಳುವಂತೆ ಕೋರಿಕೊಂಡಿದ್ದಾರೆ. ಜನವರಿ 15ರಿಂದ ವಿಶ್ವ ಹಿಂದೂ ಪರಿಷದ್ ರಾಮ ಮಂದಿರ ನಿರ್ಮಾಣಕ್ಕೆ 44 ದಿನಗಳ ದೇಣಿಗೆ ಸಂಗ್ರಹಣಾ ಅಭಿಯಾನ ಆರಂಭಿಸಿದ್ದು, ಅಭಿಯಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಕಾಪಾಡಬೇಕಾಗಿ ಪತ್ರದ ಮೂಲಕ ಕೇಳಿಕೊಂಡಿದ್ದಾರೆ.
"ಧರ್ಮ ರಾಜಕೀಯದ ಸಾಧನವಲ್ಲ. ಮಾನವ ಹಾಗೂ ದೇವರ ನಡುವಿನ ಕೊಂಡಿ. ಆದ್ದರಿಂದ ಮಂದಿರಕ್ಕೆ ದೇಣಿಗೆ ನೀಡುವುದು ಕೂಡ ವೈಯಕ್ತಿಕ ಆಯ್ಕೆ. ಹೀಗಾಗಿ ದೇಣಿಗೆಯನ್ನು ಶಾಂತಿಯುತವಾಗಿ ನಡೆಸಬೇಕಿದೆ" ಎಂದು ಮಹಾತ್ಮಾ ಗಾಂಧಿಯವರ ಹೇಳಿಕೆಯೊಂದನ್ನು ಉಲ್ಲೇಖಿಸಿ ಮನವಿ ಮಾಡಿದ್ದಾರೆ.
"ಕೋಲು, ಕತ್ತಿಗಳನ್ನು ಹಿಡಿದುಕೊಂಡು ಕೆಲವು ಸಂಘಟನೆಗಳು ದೇಣಿಗೆ ಸಂಗ್ರಹ ಕೆಲಸವನ್ನು ನಡೆಸುತ್ತಿವೆ. ಕೆಲವು ಧರ್ಮ, ಸಮುದಾಯಗಳ ವಿರುದ್ಧ ಘೋಷಣೆ ಕೂಗಲಾಗುತ್ತಿದೆ. ಇದರ ಬಗ್ಗೆ ನಿಮ್ಮ ಗಮನ ಸೆಳೆಯುತ್ತಿದ್ದೇನೆ. ಮಧ್ಯಪ್ರದೇಶದಲ್ಲಿ ಅಂಥ ಮೂರು ಘಟನೆಗಳು ನಡೆದಿವೆ. ಇತರ ಸ್ಥಳಗಳಲ್ಲಿಯೂ ಅಹಿತಕರ ಘಟನೆಗಳು ನಡೆದ ವರದಿಯಾಗಿವೆ. ಇದು ಸಾಮಾಜಿಕ ಶಾಂತಿಗೆ ಧಕ್ಕೆ ತಂದಂತೆ" ಎಂದು ಹೇಳಿದ್ದಾರೆ.
"ನೀವು ಈ ದೇಶದ ಪ್ರಧಾನಿ. ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಧರ್ಮದಿಂದ ವಿರೋಧವಿಲ್ಲ ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ ರಾಮನ ಹೆಸರಿನಲ್ಲಿ ದೇಣಿಗೆ ಸಂಗ್ರಹವು ಶಾಂತಿಯುತ ವಾತಾವರಣದಲ್ಲಿಯೇ ನಡೆಯಬೇಕಿದೆ. ಹಿಂಸಾಚಾರದಿಂದ ದೇಣಿಗೆ ಸಂಗ್ರಹಿಸುವ ಸಂಘಗಳನ್ನು ದೂರವಿಡಬೇಕಿದೆ" ಎಂದು ಸಲಹೆ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷದ್, ಸಂಗ್ರಹಿಸಿದ ದೇಣಿಗೆಯ ಲೆಕ್ಕವನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ಮುಕ್ತವಾಗಿರಿಸಬೇಕು ಎಂದಿದ್ದಾರೆ.