ಕುಂಬಳೆ: ಸೀತಾಂಗೋಳಿಯ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಸೀತಾಂಗೋಳಿಯಲ್ಲಿ ನಿರ್ಮಿಸಲಾಗಿರುವ ವೀರ ಹುತಾತ್ಮ ಯೋಧ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮಾರಕ ಭವನದ ಉದ್ಘಾಟನಾ ಸಮಾರಂಭ ಇಂದು(ಮಂಗಳವಾರ) ಬೆಳಿಗ್ಗೆ 10.30 ರಿಂದ ನಡೆಯಲಿದೆ.
ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಅಹಮ್ಮದ್ ಹಾಜಿ ಚೆರ್ಕಳ ಅವರು ಸ್ಮಾರಕ ಭವನವನ್ನು ಲೋಕಾರ್ಪಣೆಗೊಳಿಸುವರು. ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಹೆತ್ತವರಾದ ಉಣ್ಣಿಕೃಷ್ಣನ್ ಹಾಗೂ ಧನಲಕ್ಷ್ಮೀ ಯು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿವಿಧ ವಲಯಗಳ ಗಣ್ಯರು, ಸ್ಥಳೀಯರು, ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿರುವರು.
ಸೀತಾಂಗೋಳಿಯ ಹೃದಯ ಭಾಗದಲ್ಲಿ ಸ್ಥಳೀಯ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಕ್ಲಬ್ ಸದಸ್ಯರ ಹಾಗೂ ಊರ ಸಹೃದಯರ ನೆರವಿನೊಂದಿಗೆ ಸುಮಾರು 25 ಸೆಂಟ್ ನಿವೇಶನದಲ್ಲಿ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮಾರಕ ಭವನ ನಿರ್ಮಿಸಲಾಗಿದೆ. ಕಳೆದ 43 ವರ್ಷಗಳಿಂದ ಸಕ್ರಿಯವಾಗಿರುವ ಕ್ಲಬ್ ಈಗಾಗಲೇ ಹಲವು ಹತ್ತು ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳ ಮೂಲಕ ಪಕ್ಷ, ಧರ್ಮಾತೀತವಾಗಿ ಜನಮನ್ನಣೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕ್ಲಬ್ ಗೆ ಮೇಜರ್ ಉಣ್ಣಿಕೃಷ್ಣನ್ ಪ್ರೇರಣೆಯಾಗಿದ್ದು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕಹೊಂದಿದೆ. ಹಿರಿಯ ರಂಗಕರ್ಮಿ ನಾ.ದಾಮೋದರ ಶೆಟ್ಟಿ ಕ್ಲಬ್ ನ ಉದ್ಘಾಟನೆಯಿಂದ ಮೊದಲ್ಗೊಂಡು 40ನೇ ವರ್ಷದ ಸಮಾರಂಭದವರೆಗೂ ಇಲ್ಲಿ ಭಾಗವಹಿಸಿರುವುದು ಉಲ್ಲೇಖನೀಯವಾಗಿದೆ.