ಮುಂಬೈ: ವಾಟ್ಸಾಪ್ ಚಾಟ್ ಮೂಲಕ ಮೂರು ದಿನ ಮುಂಚಿತವಾಗಿಯೇ ಬಾಲಕೋಟ್ ವೈಮಾನಿಕ ದಾಳಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಿದ ಕಾರಣಕ್ಕಾಗಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರ ವಿರುದ್ಧ ಅಧಿಕಾರ ಗೌಪ್ಯತೆ ಕಾಯ್ದೆಯಡಿ ಕೇಸ್ ದಾಖಲಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.
ಅರ್ನಬ್ ಗೋಸ್ವಾಮಿ ಅವರ ವಾಟ್ಸಾಪ್ ಚಾಟ್ ಅನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ನಿರ್ಧಿಷ್ಟ ಸೇನಾ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಅವರ ವಿರುದ್ಧ ಅಧಿಕಾರ ಗೌಪ್ಯತೆ ಕಾಯ್ದೆಯಡಿ ಕೇಸ್ ದಾಖಲಿಸಿ, ಬಂಧಿಸಬಹುದೇ ಎಂಬ ಬಗ್ಗೆ ಕಾನೂನು ತಜ್ಞರ ಮತ್ತು ಹಿರಿಯ ಅಧಿಕಾರಿಗಳ ಸಲಹೆ ಪಡೆಯಲು ನಿರ್ಧರಿಸಿದ್ದೇವೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಹೇಳಿದ್ದಾರೆ.
"ನಮ್ಮ ಭದ್ರತಾ ಸೇವೆಗಳ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಭಾರತೀಯ ವಾಯುಪಡೆಯು ಬಾಲಕೋಟ್ ವೈಮಾನಿಕ ದಾಳಿಗೂ ಮೂರು ದಿನಗಳ ಮೊದಲು ಅವರು ಈ ಮಾಹಿತಿಯನ್ನು ಯಾರೊಂದಿಗೆ ಹಂಚಿಕೊಂಡಿದ್ದಾರೆ ಎಂಬುದನ್ನು ನಾವು ಕಂಡುಹಿಡಿಯಬೇಕಾಗಿದೆ. ಅಲ್ಲದೆ, ಈ ನಿರ್ಣಾಯಕ ಮಾಹಿತಿಯನ್ನು ಯಾರು ಒದಗಿಸಿದ್ದಾರೆ ಮತ್ತು ಈ ಮಾಹಿತಿ ಅರ್ನಬ್ ಹಾಗೂ ಪಾರ್ಥೋ ದಾಸ್‌ಗುಪ್ತಾ ಅವರಿಗೆ ಮಾತ್ರ ಸೀಮಿತವಾಗಿದೆಯೇ?" ಎಂಬುದರ ಬಗ್ಗೆ ತನಿಖೆ ನಡೆಸುವ ಅಗತ್ಯ ಇದೆ ಎಂದಿದ್ದಾರೆ.
ಮುಂಬೈ ಪೊಲೀಸರು ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿದ್ದು, ಈ ತನಿಖೆ ಭಾಗವಾಗಿ ಅರ್ನಾಬ್ ಗೋಸ್ವಾಮಿ ಮತ್ತು ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸಾಪ್ ಚಾಟ್ ಹೊರಬಂದಿದೆ ಎಂದು ದೇಶಮುಖ್ ಹೇಳಿದ್ದಾರೆ.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವಾಗಿ ನಾವು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ರಾಜ್ಯ ಮತ್ತು ರಾಷ್ಟ್ರದ ಭದ್ರತೆ ನಮಗೆ ಅತ್ಯಂತ ಮಹತ್ವದ್ದಾಗಿದೆ" ಎಂದು ದೇಶಮುಖ್ ತಿಳಿಸಿದ್ದಾರೆ.
ಟಿಆರ್‌ಪಿ ಪ್ರಕರಣ ತನಿಖೆ ವೇಳೆ ಮುಂಬೈ ಪೊಲೀಸರು ಕಲೆ ಹಾಕಿದ್ದ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಹಾಗೂ ಮಾಜಿ ಬಾರ್ಕ್ ಸಿಇಒ ಪಾರ್ಥೋ ದಾಸ್ ಗುಪ್ತಾ ನಡುವಿನ 500 ಪುಟಗಳ ವಾಟ್ಸಾಪ್ ಚಾಟ್ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಇವುಗಳಲ್ಲಿ ಫೆ.23ರಂದು ನಡೆದಿದ್ದ ಚಾಟ್‌ನಲ್ಲಿ ದೊಡ್ಡ ವೈಮಾನಿಕ ದಾಳಿ ನಡೆಯಬಹುದು ಎಂಬ ಬಗ್ಗೆ ಉಲ್ಲೇಖಿಸಲಾಗಿತ್ತು. ಇಬ್ಬರ ನಡುವಿನ ಈ ಸಂಭಾಷಣೆ ಬಾಲಾಕೋಟ್ ವೈಮಾನಿಕ ದಾಳಿ ನಡೆಯುವುದಕ್ಕೂ ಮೂರು ದಿನಗಳ ಮುನ್ನವೇ ನಡೆದಿದೆ.