ನವದೆಹಲಿ: ದೇಶದಾದ್ಯಂತ ಸೋಮವಾರದಿಂದ (ಫೆ.1) ಜಾರಿಗೆ ಬರುವಂತೆ ಚಲನಚಿತ್ರ ಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಸನಗಳ ಭರ್ತಿಗೆ ಅನುಮತಿ ನೀಡಲಾಗಿದೆ.
ಆದರೆ, ಚಿತ್ರಮಂದಿರಗಳ ಒಳಗೆ ಮತ್ತು ಹೊರಗೆ ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳ ಕಡ್ಡಾಯ ಪಾಲನೆ, ಹವಾನಿಯಂತ್ರಣ ವ್ಯವಸ್ಥೆಯನ್ನು 24-30 ಡಿಗ್ರಿ ಸೆಲ್ಸಿಯಸ್ ಇಡುವುದು ಅಗತ್ಯ ಎಂದೂ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಚಿತ್ರಮಂದಿರ ಆವರಣದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿ ಪ್ರದರ್ಶನದ ನಂತರ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಪ್ರಮುಖವಾಗಿ ತಿಳಿಸಲಾಗಿದೆ.
ಕಂಟೈನ್‌ಮೆಂಟ್ ವಲಯದಲ್ಲಿ ಚಿತ್ರಪ್ರದರ್ಶನಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಆಯಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಅಗತ್ಯ ನಿಯಂತ್ರಣ ಕ್ರಮ ಜಾರಿಗೊಳಿಸಬಹುದು ಎಂದು ತಿಳಿಸಲಾಗಿದೆ.
'ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕವೇ ಕಾಯ್ದಿರಿಸಲು ಮತ್ತು ದಟ್ಟಣೆಗೆ ಅವಕಾಶವಾಗದಂತೆ ಪ್ರದರ್ಶನದ ಸಮಯ ಹೊಂದಿಸಲು ಆದ್ಯತೆ ನೀಡಬೇಕು' ಎಂದೂ ಮಾರ್ಗಸೂಚಿಯನ್ನು ಉಲ್ಲೇಖಿಸಿ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ತಿಳಿಸಿದರು.
'ಜನತೆಗೊಂದು ಶುಭಸುದ್ದಿ. ಫೆಬ್ರುವರಿ ತಿಂಗಳಿನಲ್ಲಿ ಜನರು ಚಿತ್ರಮಂದಿರಗಳಲ್ಲೇ ಚಲನಚಿತ್ರ ವೀಕ್ಷಿಸಬಹುದು. ಆಸನಗಳ ಪೂರ್ಣ ಭರ್ತಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದಷ್ಟು ಆನ್‌ಲೈನ್ ಮೂಲಕವೇ ಟಿಕೆಟ್ ಕಾಯ್ದಿರಿಸುವಿಕೆಗೆ ಒತ್ತುನೀಡಬೇಕು' ಎಂದು ಸಚಿವರು ತಿಳಿಸಿದರು.
ಏಕ ಪರದೆ ಚಿತ್ರಮಂದಿರಗಳು ಅಥವಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಜನದಟ್ಟಣೆಗೆ ಆಸ್ಪದವಾಗದಂತೆ ಪ್ರದರ್ಶನಗಳ ನಡುವೆ ಅಂತರ ಇರಬೇಕು. ಆರೋಗ್ಯ ಸೇತು ಆಯಪ್ ಡೌನ್‌ಲೋಡ್ ಮಾಡಿಕೊಂಡು ಚಾಲನೆಗೊಳಿಸುವ ಕುರಿತು ಸರ್ವ ಪ್ರೇಕ್ಷಕರಿಗೆ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಹೆಚ್ಚುವರಿ ಟಿಕೆಟ್ ಕೌಂಟರ್ ತೆರೆಯಬೇಕು. ಕೌಂಟರ್ ದಿನಪೂರ್ತಿ ತೆರೆದಿರಿಸಬಹುದು ಅಥವಾ ಮುಂಗಡವಾಗಿ ಟಿಕೆಟ್ ಪಡೆಯುವ ಅವಕಾಶ ನೀಡಬೇಕು. ಅಲ್ಲದೆ, ಸಾಲಿನಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಸಿಬ್ಬಂದಿ ನಿಯೋಜಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಮಧ್ಯಂತರ ವೇಳೆಯಲ್ಲಿಯೂ ಅಂತರ ಕಾಯ್ದುಕೊಳ್ಳಲು ಒತ್ತು ನೀಡಬೇಕು. ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಮಧ್ಯಂತರದ ಅವಧಿ ಹೆಚ್ಚಿಸಬಹುದು. ಆಗಾಗ್ಗೆ ಇಡೀ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಿಸಬೇಕು. ಜೊತೆಗೆ, ಟಿಕೆಟ್ ಮಾರಾಟ ಕೌಂಟರ್ ಸೇರಿದಂತೆ ಜನರು ಹೆಚ್ಚು ಸೇರುವ ಕಡೆ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಚಿತ್ರೋದ್ಯಮದ ಸ್ವಾಗತ
ಭಾರತೀಯ ನಿರ್ಮಾಪಕರ ಒಕ್ಕೂಟ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ) ಕೇಂದ್ರ ಸರ್ಕಾರರದ ಈ ತೀರ್ಮಾವವನ್ನು ಸ್ವಾಗತಿಸಿದೆ. ಚಿತ್ರೋದ್ಯಮದ ಚೇತರಿಕೆಗೆ ಈ ಕ್ರಮ ಸಹಕಾರಿಯಾಗಿದೆ ಎಂದು ಹೇಳಿವೆ.
ಈ ಕುರಿತು ಟ್ವೀಟ್‌ನಲ್ಲಿ ಎಂಎಐ, 'ಶೇ 100ಆಸನ ಭರ್ತಿಗೆ ಅವಕಾಶ ಕಲ್ಪಿಸುವುದನ್ನು ಸ್ವಾಗತಿಸುತ್ತೇವೆ. ಈ ಕುರಿತು ಸಚಿವಾಲಯದ ಜೊತೆಗೆ ಚರ್ಚಿಸಿದ ನಟ, ಸಂಸದ ಸನ್ನಿ ಡಿಯೋಲ್ ಅವರಿಗೆ ಕೃತಜ್ಞತೆಗಳು' ಎಂದು ಹೇಳಿದೆ.