ಕಾಸರಗೋಡು: ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಚ್ಚುಗಡೆಗೊಂಡಿದ್ದ ಚಿತ್ರಮಂದಿರಗಳು ದೀರ್ಘ ಕಾಲದ ನಂತರ ಬುಧವಾರ ತೆರೆದು ಕಾರ್ಯಾಚರಿಸಿದೆ. ಕಾಸರಗೋಡಿನಲ್ಲಿ ಚಿತ್ರ ಮಂದಿರವೊಂದರಲ್ಲಿ ಪ್ರದರ್ಶನಗೊಳ್ಳುತ್ತಿರುವ ವಿಜಯನ್ ಅಭಿನಯದ ತಮಿಳು ಚಿತ್ರ "ಮಾಸ್ಟರ್' ಸಿನಿಮಾ ವೀಕ್ಷಣೆಗೆ ವಿಜಯ್ ಅಭಿಮಾನಿ ಬಳಗ ನಾಸಿಕ್ ಬ್ಯಾಂಡ್‍ನೊಂದಿಗೆ ಚಿತ್ರಮಂದಿರಕ್ಕೆ ಆಗಮಿಸಿ, ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ವಿಜಯ್ ಭಿತ್ತಿಪತ್ರ, ಫ್ಲ್ಯಾಗ್‍ನೊಂದಿಗೆ ಚಿತ್ರಮಂದಿರ ಪ್ರವೇಶಿಸಿದ ಅಭಿಮಾನಿ ಬಳಗದ ಸದಸ್ಯರು ಸಿಹಿ ತಿನಿಸು ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾಸರಗೋಡು ನಗರದಲ್ಲಿ ಒಟ್ಟು ಆರು ಚಿತ್ರಮಂದಿರಗಳು ತೆರೆದು ಕಾರ್ಯಾಚರಿಸುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ 50ಶೇ. ವೀಕ್ಷಕರಿಗೆ ಮಾತ್ರ ಪ್ರವೇಶಾನುಮತಿ ಕಲ್ಪಿಸಲಾಗಿದೆ. ಆನ್‍ಲೈನ್ ಮೂಲಕ ಟಿಕೆಟ್ ಬುಕ್ ನಡೆಸಿರುವುದರಿಂದ ನಿಗದಿತ ಸೀಟುಗಳು ಭರ್ತಿಯಾಘಿದ್ದು, ಚಿತ್ರ ವೀಕ್ಷಣೆಗೆ ಆಗಮಿಸಿದ ಇತರ ಪ್ರೇಕ್ಷಕರು ಸಪ್ಪೆ ಮೋರೆಯೊಂದಿಗೆ ತೆರಳಬೇಕಾಯಿತು. ರಾಜ್ಯದಲ್ಲಿ 670ಸಿನಿಮಾ ಮಂದಿರಗಳಿದ್ದು, ಇವುಗಳಲ್ಲಿ 500ಕ್ಕೂ ಹೆಚ್ಚು ಬುಧವಾರ ತೆರೆದುಕೊಂಡಿದೆ.