ನವದೆಹಲಿ: ಭಾರತೀಯರು ವಿದೇಶದಲ್ಲಿ ಹೊಂದಿರುವ ಬಹಿರಂಗಪಡಿಸದ ಆಸ್ತಿ ಹಾಗೂ ಕಪ್ಪು ಹಣದ ಕುರಿತ ಪ್ರಕರಣಗಳ ಕೇಂದ್ರೀಕೃತ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಯ ದೇಶಾದ್ಯಂತದ ತನಿಖಾ ವಿಭಾಗದಲ್ಲಿ ವಿಶೇಷ ಘಟಕವನ್ನು ಕೇಂದ್ರ ಸರಕಾರ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿರುವ ತೆರಿಗೆ ಇಲಾಖೆಯ ಎಲ್ಲಾ 14 ತನಿಖಾ ನಿರ್ದೇಶನಾಲಯಗಳಲ್ಲಿ ವಿದೇಶಿ ಆಸ್ತಿ ತನಿಖಾ ಘಟಕ (ಎಫ್‌ಎಐಯು)ಗಳನ್ನು ಇತ್ತೀಚೆಗೆ ರೂಪಿಸಲಾಗಿದೆ.
ದಾಳಿ ನಡೆಸುವ, ಮುಟ್ಟುಗೋಲು ಹಾಕಿಕೊಳ್ಳುವ ಹಾಗೂ ವಿವಿಧ ಮಾದರಿಗಳ ಮೂಲಕ ತೆರಿಗೆ ವಂಚನೆಯನ್ನು ಪರಿಶೀಲಿಸಲು ಬುದ್ಧಿಮತ್ತೆಯನ್ನು ಅಭಿವೃದ್ಧಿಗೊಳಿಸುವ ಪ್ರಾಥಮಿಕ ಉದ್ದೇಶವನ್ನು ಇದು ಹೊಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುಮೋದನೆ ನೀಡಿದ ಬಳಿಕ ಈ ಘಟಕವನ್ನು ರೂಪಿಸಲು ಕಳೆದ ನವೆಂಬರ್‌ನಲ್ಲಿ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ತೆರಿಗೆ ಇಲಾಖೆಯಲ್ಲಿ ಅಸ್ತಿತ್ವದಲ್ಲಿದ್ದ ಒಟ್ಟು 69 ಹುದ್ದೆಗಳನ್ನು ಪರಿವರ್ತಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಡಿಟಿ ಆದಾಯ ತೆರಿಗೆ ಇಲಾಖೆಗೆ ನೀತಿಗಳನ್ನು ರೂಪಿಸುತ್ತದೆ. ''ವಿದೇಶದಲ್ಲಿ ಭಾರತೀಯರು ಹೊಂದಿರುವ ಬಹಿರಂಗಪಡಿಸದ ಆಸ್ತಿ ಹಾಗೂ ಸಂಗ್ರಹಿಸಲಾದ ಕಪ್ಪು ಹಣದ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ತೆರಿಗೆ ಇಲಾಖೆಯ ವಿವಿಧ ತನಿಖಾ ನಿರ್ದೇಶನಾಲಯಗಳಲ್ಲಿ ಎಫ್‌ಎಐಯುಗಳನ್ನು ನೂತನ ಘಟಕವಾಗಿ ರೂಪಿಸಲಾಗಿದೆ'' ಎಂದು ಅವರು ತಿಳಿಸಿದ್ದಾರೆ. ಹೊಸ ಒಪ್ಪಂದಗಳ ಮೂಲಕ ಭಾರತ ದೊಡ್ಡ ಪ್ರಮಾಣದ ದತ್ತಾಂಶವನ್ನು ಪಡೆಯುತ್ತಿದೆ. ಇವುಗಳಲ್ಲಿ ಕೆಲವು ಒಪ್ಪಂದಗಳನ್ನು ತೀರಾ ಇತ್ತೀಚೆಗೆ ಪುನಾರಚಿಸಲಾಗಿದೆ ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ.