ಉಪ್ಪಳ: ಮಂಗಲ್ಪಾಡಿ ಗ್ರಾ.ಪಂ.ನ ಮಣಿಮುಂಡ ಪ್ರದೇಶ ಕಳೆದ ಅರ್ಧ ಶತಮಾನದ ಲೀಗ್ ಆಡಳಿತಾವಧಿಯಲ್ಲಿ ಅರ್ಧ ರೂಪಾಯಿ ಸಹ ಅಭಿವೃದ್ಧಿ ಹೊಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಒಂದೇ ಪಕ್ಷ ಸತತವಾಗಿ ಅಧಿಕಾರಕ್ಕೆ ಬಂದರೂ ಇಲ್ಲಿಯವರೆಗೆ ಯಾವ ಅಭಿವೃದ್ದಿ ಚಟುವಟಿಕೆಗಳೂ ಇಲ್ಲದೆ ತೀವ್ರ ಹಿಂದುಳಿಯುವಿಕೆಗೆ ಕಾರಣವಾಗಿ ಜನಸಾಮಾನ್ಯರ ಸಂಕಷ್ಟಕ್ಕೆ ಎಡೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೆಚ್ಚು ಜನ ಸಾಂದ್ರತೆಯಿರುವ ಈ ಪ್ರದೇಶ ಬೀದಿ ದೀಪ, ಉತ್ತಮ ರಸ್ತೆ, ಕುಡಿಯುವ ನೀರಿನ ಯೋಜನೆ ಮತ್ತು ಒಳಚರಂಡಿ ವ್ಯವಸ್ಥೆಗಳಿಲ್ಲದೆ ನಲುಗುತ್ತಿದೆ. ಆದರೆ ಇದೀಗ ನೂತನವಾಗಿ ಚುನಾಯಿತರಾದ ಗ್ರಾ.ಪಂ.ಸದಸ್ಯ ಇಂತಹ ಸಮಸ್ಯೆಗಳಿಗೆಲ್ಲ ಪರಿಹಾರ ಒದಗಿಸುವನೆಂದು ಸ್ಥಳೀಯರು ಭರವಸೆ ವ್ಯಕ್ತಪಡಿಸಿದ್ದಾರೆ.
ಮಂಗಲ್ಪಾಡಿ ಗ್ರಾ.ಪಂ. ವಾರ್ಡ್ಗಳ ಪೈಕಿ ಮಣಿಮುಂಡ ವಾರ್ಡ್ ೨೩ನೇ ಸಂಖ್ಯೆಯದ್ದಾಗಿದ್ದು, ಇದೇ ವೇಳೆ ಅಭಿವೃದ್ದಿಯಲ್ಲೂ ೨೩ನೇ ಸ್ಥಾನವನ್ನಷ್ಟೇ ಈವರೆಗೆ ಕಾಯ್ದುಕೊಳ್ಳಲಾಗಿತ್ತೆಂದು ಸ್ಥಳೀಯರು ಅವಲತ್ತುಕೊಂಡಿದ್ದಾರೆ. ಮಣಿಮುಂಡ ಅಂಗನವಾಡಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಕರೋಡ ಕುಡಿಯುವ ನೀರಿ ಯೋಜನೆ ವ್ಯರ್ಥವಾಗಿ ಉಪಯೋಗಶೂನ್ಯವಾಗಿದೆ.
ಇಂತಹ ಅವಗಣನೆಯ ವಿರುದ್ದ ಈ ಬಾರಿ ಸ್ಥಳೀಯರು ಎಲ್.ಡಿ.ಎಫ್. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೊಹಮ್ಮದ್ ರನ್ನು ಹೆಚ್ಚಿನ ಭರವಸೆಯೊಂದಿಗೆ ಆಯ್ಕೆ ಮಾಡಿರುವರು. ಸದಸ್ಯ ಮೊಹಮ್ಮದ್ ಅವರು ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸ್ಥಳೀಯರಿಗೆ ಭರವಸೆಯನ್ನೂ ಈಗಾಗಲೇ ನೀಡಿರುವರು. ಭ್ರಷ್ಟಾಚಾರವಿಲ್ಲದೆ ವಾರ್ಡ್ನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದು ಮೊಹಮ್ಮದ್ ತಿಳಿಸಿದ್ದಾರೆ.