ನವದೆಹಲಿ: ಐದು ವರ್ಷದವರೆಗಿನ ಮಕ್ಕಳಿಗೆ ಪೋಲಿಯೋ ಸಮಸ್ಯೆಯಿಂದ ರಕ್ಷಣೆ ಒದಗಿಸಲು ನೀಡುವ ಪೋಲಿಯೋ ಹನಿಯ ರಾಷ್ಟ್ರೀಯ ಪೋಲಿಯೋ ಪ್ರತಿರಕ್ಷಣಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ರಾಷ್ಟ್ರೀಯ ಪ್ರತಿರಕ್ಷಣಾ ದಿನ (ಎನ್‌ಐಡಿ) ಅಥವಾ ಪಲ್ಸ್ ಪೋಲಿಯೋ ಪ್ರತಿರಕ್ಷಣಾ ಕಾರ್ಯಕ್ರಮವನ್ನು ದೇಶದಾದ್ಯಂತ ಜನವರಿ 17ಕ್ಕೆ ನಿಗದಿಪಡಿಸಲಾಗಿತ್ತು. ಆದರೆ 'ಅನಿರೀಕ್ಷಿತ ಚಟುವಟಿಕೆಗಳ' ಕಾರಣ 'ಮುಂದಿನ ಸೂಚನೆಯವರೆಗೂ' ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ಜನವರಿ 9ರಂದು ಎಲ್ಲ ರಾಜ್ಯಗಳಿಗೂ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವಾಲಯ, ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡುವ ನಿರ್ಧಾರದ ಬಗ್ಗೆ ಮಾಹಿತಿ ನೀಡಿದೆ.
'ಅನಿರೀಕ್ಷಿತ ಚಟುವಟಿಕೆಗಳ ಕಾರಣ, 2021, ಜನವರಿ 17ರಂದು ನಿಗದಿಪಡಿಸಲಾಗಿದ್ದ ಪೋಲಿಯೋ ಎನ್‌ಐಡಿ ಕಾರ್ಯಕ್ರಮವನ್ನು ಮುಂದಿನ ನೋಟಿಸ್‌ವರೆಗೂ ಮುಂದೂಡಲು ನಿರ್ಧರಿಸಲಾಗಿದೆ' ಎಂದು ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಹೇಳಲಾಗಿದೆ.
ಜನವರಿ 8ರಂದು ಹೇಳಿಕೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಜನವರಿ 17ರಂದೇ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದರು. 'ಜನವರಿ 17ರಂದು ನಾವು ರಾಷ್ಟ್ರೀಯ ಪ್ರತಿರಕ್ಷಣಾ ದಿನದ ಪೋಲಿಯೋ ಕಾರ್ಯಕ್ರಮವನ್ನು ಎರಡು ಮೂರು ದಿನಗಳವರೆಗೆ ನಡೆಸುತ್ತೇವೆ' ಎಂದು ಹೇಳಿದ್ದರು.
ದೇಶದಾದ್ಯಂತ ಜ. 16ರಿಂದ ಕೊರೊನಾ ವೈರಸ್ ಲಸಿಕೆ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ. ಆರೋಗ್ಯ ಕಾರ್ಯಕರ್ತರಿಗೆ ಈ ಜವಾಬ್ದಾರಿ ನೀಡಿರುವುದರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಮುಂದೂಡಲಾಗಿದೆ.