ಬದಿಯಡ್ಕ: ಯಕ್ಷಗಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಅಕಾಡೆಮಿಕ್ ಶಿಸ್ತಿನ ಕಾರ್ಯಗಳು ನಡೆಯಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಾಚರಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ರಂಗಸಿರಿಯಂತಹ ಸಕ್ರಿಯ ಸಂಸ್ಥೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಹೇಳಿದರು.
ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಬದಿಯಡ್ಕದ ರಂಗಸಿರಿ ನಡೆಸುವ ಉಚಿತ ಯಕ್ಷಗಾನ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಕಾಡೆಮಿಯ ಇನ್ನೋರ್ವ ಸದಸ್ಯ ನ್ಯಾಯವಾದಿ. ದಾಮೋದರ ಶೆಟ್ಟಿ ಯವರು ಮಾತಾಡಿ, ಯಕ್ಷಗಾನವು ಒಬ್ಬನಲ್ಲಿ ಕಾಯಾ ವಾಚಾ ಮನಸಾ ಪರಿಶುದ್ಧತೆಯನ್ನು ಮೂಡಿಸುತ್ತದೆ. ಹೊಸತಲೆಮಾರು ಯಕ್ಷಗಾನ ಕಲಿಕೆಯತ್ತ ಒಲವು ತೋರುತ್ತಿರುವುದು ಸಂತಸದ ವಿಚಾರ ಎಂದರು.
ರಂಗಸಿರಿಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಸಭೆಯ ಅಧ್ಯಕ್ಷತೆವಹಿಸಿದ್ದರು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಉಪಸ್ಥಿತರಿದ್ದರು. ಕು.ಸುಸ್ಮಿತ ಪ್ರಾರ್ಥನೆ ಹಾಡಿದರು. ಕು.ಅಭಿಜ್ಞ ಭಟ್ ಸ್ವಾಗತಿಸಿ, ಕು.ಸುಜಾತಾ ಮಾಣಿಮೂಲೆ ವಂದಿಸಿದರು. ರಂಗಸಿರಿಯ ಸ್ಥಾಪಕ ಕಾರ್ಯದರ್ಶಿ ಶ್ರೀಶ ಕುಮಾರ ಪಿ ನಿರೂಪಿಸಿದರು. ಶಿಬಿರಾರ್ಥಿಗಳು ತುಂಬು ಉತ್ಸಾಹದಲ್ಲಿ ಯಕ್ಷಗಾನ ಕಲಿಕೆಯನ್ನು ಆರಂಭಿಸಿದರು.
ಉದ್ಘಾಟನೆ ವೈಶಿಷ್ಟ್ಯ: ವೇದಿಕೆಯಲ್ಲಿನ ಗಣ್ಯರು ದೀಪೆÇೀಜ್ವಲನೆ ಮಾಡುತ್ತಿದ್ದಂತೇ, ವೇದಿಕೆಯಲ್ಲಿ ಯಕ್ಷಗಾನ ಸ್ತುತಿ "ಮುದದಿಂದ ನಿನ್ನ ಕೊಂಡಾಡುವೆ..." ಉದಯೋನ್ಮುಖ ಭಾಗವತೆ ಕು. ವಿದ್ಯಾ ಕುಂಟಿಕಾನಮಠ ಅವರ ಸುಶ್ರಾವ್ಯ ಕಂಠದಿಂದ ಹೊಮ್ಮಿತು. ಅದಕ್ಕೆ ಇಂಬು ನೀಡುವಂತೆ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಚೆಂಡೆ, ಕೃಷ್ಣಮೂರ್ತಿ ಎಡನಾಡು ಮದ್ದಳೆ ಹಾಗೂ ಉಪಾಸನಾ ಪಂಜರಿಕೆ ಚಕ್ರತಾಳದ ಉತ್ತಮ ಹಿಮ್ಮೇಳ ಸಾಥ್ ನೀಡಿದರು.