ನವದೆಹಲಿ: ವಾಟ್ಸಾಪ್ ಕಂಪೆನಿಯು ತನ್ನ ನೂತನ ಗೌಪ್ಯತಾ ನಿಯಮಗಳನ್ನು ಬಳಕೆದಾರರು ಒಪ್ಪದಿದ್ದಲ್ಲಿ ಫೆಬ್ರವರಿಯಿಂದ ಅವರ ಖಾತೆಗಳನ್ನು ಬ್ಲಾಕ್ ಮಾಡಲಾಗುವುದು ಎಂದು ಹೇಳಿಕೆ ನೀಡಿತ್ತು. ಅಲ್ಲದೇ, ಈ ನಿಯಮದ ಅನುಸಾರ ಫೇಸ್ಬುಕ್ ನೊಂದಿಗೆ ಮತ್ತು ಥರ್ಡ್ ಪಾರ್ಟಿ ಆಪ್ ಗಳೊಂದಿಗೆ ವಾಟ್ಸಾಪ್ ಖಾತೆಯ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಹೇಳಿಕೆ ನೀಡಿತ್ತು. ಇದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿ ಹಲವಾರು ಮಂದಿ ವಾಟ್ಸಾಪ್ ಬಳಕೆಯನ್ನು ನಿಲ್ಲಿಸಿ, ಟೆಲಿಗ್ರಾಂ, ಸಿಗ್ನಲ್ ಆಪ್ ಗಳನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸಿದ್ದರು. ಈ ಕಾರಣದಿಂದಾಗಿ ವಾಟ್ಸಾಪ್ ಗೆ ಹಿನ್ನಡೆಯಾಗಿದ್ದು, ಇದೀಗ ಕೊನೆಗೂ ವಾಟ್ಸಾಪ್ ಕಂಪೆನಿಯು ಸ್ಪಷ್ಟೀಕರಣ ನೀಡಿದೆ.
ತನ್ನ ಟ್ವಿಟರ್ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದ ವಾಟ್ಸಾಪ್ ಕಂಪೆನಿಯು ವಾಟ್ಸಾಪ್ ಯಾವುದೇ ಕಾರಣಕ್ಕೂ ನಿಮ್ಮ ಖಾಸಗಿ ಸಂದೇಶಗಳನ್ನು ನೋಡುವುದಿಲ್ಲ. ಹೊಸ ನಿಯಮಗಳು ವಾಟ್ಸಾಪ್ ನಲ್ಲಿ ನ ವ್ಯವಹಾರಕ್ಕೆ ಸೀಮಿತವಾಗಿರುತ್ತದೆ ಎಂದಿದೆ. ಇನ್ನೂ ಕೆಲವು ವಿಚಾರಗಳ್ನು ವಾಟ್ಸಪ್ ಹಂಚಿಕೊಂಡಿದ್ದು, ಅವು ಈ ಕೆಳಗಿನಂತಿವೆ.
1. ನಿಮ್ಮ ಕಾಲ್ ಅಥವಾ ನಿಮ್ಮ ಖಾಸಗಿ ಮೆಸೇಜ್ ಗಳನ್ನು ವಾಟ್ಸಪ್, ಫೇಸ್ ಬುಕ್ ಗೆ ವೀಕ್ಷಿಸಲು ಸಾಧ್ಯವಿಲ್ಲ.
2. ನಿಮಗೆ ಯಾರೆಲ್ಲಾ ಕರೆ ಮಾಡುತ್ತಿದ್ದಾರೆ, ಮೆಸೇಜ್ ಮಾಡುತ್ತಿದ್ದಾರೆಂದು ಎಲ್ಲರ ಪಟ್ಟಿಯನ್ನು ವಾಟ್ಸಾಪ್ ಸಿದ್ಧಪಡಿಸಿಟ್ಟುಕೊಳ್ಳುವುದಿಲ್ಲ.
3. ನೀವು ಶೇರ್ ಮಾಡಿದ ಲೊಕೇಶನ್ ಅನ್ನು ವಾಟ್ಸಾಪ್ ಮತ್ತು ಫೇಸ್ ಬುಕ್ ಗೆ ನೋಡಲು ಸಾಧ್ಯವಿಲ್ಲ
4. ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ಅನ್ನು ಫೇಸ್ ಬುಕ್ ಗೆ ನೀಡುವುದಿಲ್ಲ.
5. ವಾಟ್ಸಾಪ್ ನ ಗ್ರೂಪ್ ಗಳು ಖಾಸಗಿಯಾಗಿಯೇ ಇರುತ್ತವೆ. ಸಾರ್ವಜನಿಕವಾಗಿರುವುದಿಲ್ಲ.
6. ನಿಮ್ಮ ಮೆಸೇಜ್ ಅಳಿಸುವಂತಹ (ಡಿಸ್ ಅಪಿಯರ್) ವ್ಯವಸ್ಥೆಯನ್ನು ನಿಮಗೆ ಅಳವಡಿಸಬಹುದಾಗಿದೆ.
7.ನಿಮ್ಮ ಮಾಹಿತಿಗಳನ್ನು ನಿಮಗೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ನಿಮ್ಮ ಯಾವುದೇ ಖಾಸಗಿ ಮಾಹಿತಿಗಳನ್ನು ನಾವು ಫೇಸ್ಬುಕ್ ಜೊತೆ ಹಂಚಿಕೊಳ್ಳುವುದಿಲ್ಲ. ನೀವು ಕಳಿಸಿರುವ ಖಾಸಗಿ ಮೆಸೇಜ್ ಗಳನ್ನು ವೀಕ್ಷಿಸಲು ಯಾರಿಗೂ ಸಾಧ್ಯವಿಲ್ಲ ಎಂದು ವಾಟ್ಸಾಪ್ ಇಂದು ಬೆಳಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದೆ.