ಪೆರ್ಲ: ತಿರುವನಂತಪುರದ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸುತ್ತಿರುವ ಮನೆಗಳಿಗೆ ಮೂಲಸೌಕರ್ಯ ಒದಗಿಸಿಕೊಡುವಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆಯುತ್ತಿದ್ದು, ಇದರಿಂದ ಕೋಟ್ಯಂತರ ರೂ. ವೆಚ್ಚದ ವಸತಿ ಯೋಜನೆಗಳು ಶಿಥಿಲಗೊಳ್ಳುತ್ತಿದೆ.
ಟ್ರಸ್ಟ್ ವತಿಯಿಂದ ಪುಲ್ಲೂರ್ ಪೆರಿಯ ಪಂಚಾಯಿತಿಯ ಪೆರಿಯ ಕಾಟ್ಟುಮುಂಡ ಮತ್ತು ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಕಾನ ಪ್ರದೇಶದಲ್ಲಿ 81ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಪೆರಿಯ ಕಾಟ್ಟುಮುಂಡದಲ್ಲಿ 45 ಹಾಗೂ ಕಾನದಲ್ಲಿ 36ಮನೆಗಳ ನಿರ್ಮಾಣ ಕಾರ್ಯಪೂರ್ತಿಗೊಳಿಸಲಾಗಿದೆ. ಪೆರಿಂiÀiದ 45ಮನೆಗಳಲ್ಲಿ 22ಮನೆಗಳನ್ನು ಮಾತ್ರ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ 23ಮನೆಗಳ ಹಸ್ತಾಂತರ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ವಿಚಾರದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ರಾಜ್ಯ ಮಾನವಹಕ್ಕು ಆಯೋಗ ಇತ್ತೀಚೆಗೆ ನೋಟೀಸನ್ನೂ ರವಾನಿಸಿದೆ.
ಮೂಲ ಸೌಕರ್ಯದ ಕೊರತೆ:
ಎಣ್ಮಕಜೆ ಪಂಚಾಯಿತಿಯ ಕಾನ ಪ್ರದೇಶದಲ್ಲಿ 36ಮನೆಗಳನ್ನು ನಿರ್ಮಿಸಿ ಎರಡುವರೆ ವರ್ಷ ಕಳೆದರೂ , ವಿದ್ಯುತ್ ಹಾಗೂ ರಸ್ತೆ ನಿರ್ಮಾಣಕಾರ್ಯ ನಡೆಯದಿರುವುದರಿಂದ ಈ ಮನೆಗಳು ಶಿಥಿಲಾವಸ್ಥೆ ತಲುಪಿದೆ. ಮನೆ ಸುತ್ತು ಕಾಡುಬೆಳೆದು, 2017 ಮಾರ್ಚ್ ತಿಂಗಳಲ್ಲಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಒಂದುವರೆ ವರ್ಷದೊಳಗೆ ಮನೆ ಕೆಲಸ ಪೂರ್ತಿಗೊಳಿಸಲಾಗಿದೆ. ವಸತಿಸಮುಚ್ಛಯಕ್ಕೆ ತೆರಳುವ ರಸ್ತೆ ಬೇರೊಬ್ಬರ ಜಾಗದಲ್ಲಿ ಹಾದುಹೋಗುವುದರಿಂದ ಪ್ರಸಕ್ತ ಬೇರೆ ರಸ್ತೆಹಾದಿ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ವಿದ್ಯುತ್ ಸಂಪರ್ಕವೂ ಲಭಿಸಿಲ್ಲ. 50ಸಾವಿರ ಲೀ. ಸಾಮಥ್ರ್ಯದ ನೀರಿನ ಟ್ಯಾಂಕ್ ನಿರ್ಮಾಣಕಾರ್ಯವೂ ಇನ್ನಷ್ಟೆ ನಡೆಯಬೇಕಾಗಿದೆ. ವಸತಿ ಸಮುಚ್ಛಯದ ಸನಿಹ ಮಕ್ಕಳ ಆಟದ ಪಾರ್ಕ್, ತೆರೆದ ಸಭಾಂಗಣದ ಜತೆ ಸಣ್ಣ ಟೌನ್‍ಶಿಪ್ ನಿರ್ಮಿಸುವ ಯೋಜನೆ ಟ್ರಸ್ಟ್‍ಗಿದ್ದು, ಇದರಂತೆ ಕೆಲಸಕಾರ್ಯಗಳ ಮುಂದುವರಿಸಲಾಗದಿರುವುದು ಟ್ರಸ್ಟ್ ಪದಾಧಿಕಾರಿಗಳನ್ನು ಚಿಂತೆಗೀಡುಮಾಡಿದೆ. ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರಿಗೆ ಈ ಮನೆಗಳ ಕೀಲಿಕೈ ಹಸ್ತಾಂತರಿಸಬೇಕಾಗಿದ್ದು, ಇವರೆಲ್ಲರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಬಾಡಿಗೆ ಮನೆಗಳಲ್ಲಿ, ಇನ್ನು ಕೆಲವರು ಹಳೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ.
ಸಾಮಾಜಿಕ ಕಳಕಳಿಯೊಂದಿಗೆ ಚಟುವಟಿಕೆ ನಡೆಸುತ್ತಿರುವ ತಿರುವನಂತಪುರದ ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್‍ನ ಜಿಲ್ಲೆಯ ಜೀವ ಕಾರುಣ್ಯ ಚಟುವಟಿಕೆಗಳಿಗೆ ಸರ್ಕಾರದಿಂದ ನಿರೀಕ್ಷಿತ ಸಹಾಯ ಲಭ್ಯವಾಗದ ಹಿನ್ನೆಲೆಯಲ್ಲಿ ಯೋಜನೆಗಳು ಅಯೋಮಯವಾಗುತ್ತಿದೆ. ಇದರಿಂದ ಟ್ರಸ್ಟ್ ನೀಡುವ ಸವಲತ್ತುಗಳಿಂದ ಬಡ ಸಂತ್ರಸ್ತರು ವಂಚಿತರಾಗಬೇಕಾಗುತ್ತಿದೆ.
ಅಭಿಮತ:
ಶ್ರೀ ಸತ್ಯಸಾಯಿ ಅಭಯಾಶ್ರಮ ಟ್ರಸ್ಟ್ ನಡೆಸುತ್ತಿರುವ ಯೋಜನೆಗಳು ಜಿಲ್ಲಾಧಿಕಾರಿ ಮೇಲ್ನೋಟದಲ್ಲಿ ನಡೆಯುತ್ತಿದೆ. ಯೋಜನೆ ಸಾಕಾರಕ್ಕೆ ಹೊಸದಾಗಿ ಆಡಳಿತಕ್ಕೆ ಬಂದಿರುವ ಪಂಚಾಯಿತಿ ಸಮಿತಿ ಎಲ್ಲ ರೀತಿಯ ನೆರವು ನೀಡಲಿದೆ. ರಸ್ತೆ, ವಿದ್ಯುತ್ ಸಂಪರ್ಕಕ್ಕಾಗಿ ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು.
-ಸೋಮಶೇಖರ ಜೆ.ಎಸ್. ಅಧ್ಯಕ್ಷ
ಎಣ್ಮಕಜೆ ಗ್ರಾಮ ಪಂಚಾಯಿತಿ