ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್‌ಡಿಆರ್‌ಎಫ್) 100ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯನ್ನೊಳಗೊಂಡ ಮೊದಲ ತಂಡವನ್ನು ಸೇರ್ಪಡೆಗೊಳಿಸಲಾಗಿದೆ.
'ಎನ್‌ಡಿಆರ್‌ಎಫ್‌ನಲ್ಲಿ ತರಬೇತಿ ಪಡೆದಿರುವ ಮೊದಲ ಮಹಿಳಾ ತಂಡದ ಸಿಬ್ಬಂದಿಯನ್ನು ಈಚೆಗಷ್ಟೇ ಉತ್ತರ ಪ್ರದೇಶದ ಘರ್ ಮುಕ್ತೇಶ್ವರ ಪಟ್ಟಣದಲ್ಲಿ ಕರ್ತವ್ಯದ ಮೇರೆಗೆ ನಿಯೋಜಿಸಲಾಗಿತ್ತು' ಎಂದು ಎನ್‌ಡಿಆರ್‌ಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಎನ್‌ಡಿಆರ್‌ಎಫ್‌ನ ಮೊದಲ ಮಹಿಳಾ ತಂಡವು ಅಗತ್ಯ ರಕ್ಷಣಾ ಕೌಶಲಗಳ ತರಬೇತಿಯನ್ನು ಪಡೆದಿದ್ದು, ಘರ್ ಮುಕ್ತೇಶ್ವರದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದೆ' ಎಂದು ಎನ್‌ಡಿಆರ್‌ಎಫ್‌ನ ನಿರ್ದೇಶಕ ಜನರಲ್ ಎಸ್.ಎನ್. ಪ್ರಧಾನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
'ದಶಕದ ಹಿಂದೆ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಈಚೆಗೆ ಮಹಿಳೆಯರು ಪಾಲ್ಗೊಳ್ಳುವಂತಾಗಿದೆ. ಈಗಾಗಲೇ ಮೊದಲ ತಂಡದಲ್ಲಿ 100ಕ್ಕೂ ಹೆಚ್ಚಿನ ಮಹಿಳಾ ಸಿಬ್ಬಂದಿ ತರಬೇತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ 200ಕ್ಕೂ ಹೆಚ್ಚು ತಲುಪುವ ನಿರೀಕ್ಷೆ ಇದೆ' ಎಂದು ಪ್ರಧಾನ್ ಮಾಹಿತಿ ನೀಡಿದ್ದಾರೆ.
ಎನ್‌ಡಿಆರ್‌ಎಫ್‌ಗೆ ಸೇರ್ಪಡೆಗೊಂಡಿರುವ ಮಹಿಳಾ ಸಿಬ್ಬಂದಿ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಶ್ರೇಣಿಯಲ್ಲಿದ್ದಾರೆ.