ನವದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯ ವಿವಿಧೆಡೆ ನಡೆದ ಹಿಂಸಾಚಾರದ ಬಳಿಕ ರೈತ ಒಕ್ಕೂಟದಲ್ಲಿ ಒಡಕು ಮೂಡಿದೆ.
ದೆಹಲಿಯ ನಾನಾ ಗಡಿಯಲ್ಲಿ ನವೆಂಬರ್ 26ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು ನಿನ್ನೆ ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ಹಿಂಸಾಚಾರ ನಡೆಸಿದ ಬಳಿಕ ಇದೀಗ ರೈತರ ಆಂದೋಲನ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಭಾರತೀಯ ಕಿಸಾನ್ ಯೂನಿಯನ್(ಬಾನು) ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ರೈತ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿವೆ.
ದೆಹಲಿಗೆ ಪ್ರವೇಶಿಸಲು ರೈತರು ಬ್ಯಾರಿಕೇಡ್‌ಗಳನ್ನು ಮುರಿದು ರಾಷ್ಟ್ರದ ರಾಜಧಾನಿಯ ಹಲವಾರು ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ. ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಆಯೋಜಿಸಲಾಗಿದ್ದ ಟ್ರಾಕ್ಟರ್ ರ್ಯಾಲಿ ವೇಳೆ ಹಿಂಸಾಚಾರ ಸಂಭವಿಸಿದೆ. ಗಲಭೆಕೋರರು ಹಲವಾರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳು ಹಾನಿಗೊಳಿಸಿದ್ದಾರೆ.
ಬೇರೇಯವರ ನಿರ್ದೇಶಕದ ಮೇರೆಗೆ ಪ್ರತಿಭಟನೆ ಮುಂದಕ್ಕೆ ಸಾಗಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಅವರಿಗೆ ಶುಭ ಹಾರೈಸುತ್ತೇವೆ. ಆದರೆ ಸರ್ದಾರ್ ವಿಎಂ ಸಿಂಗ್ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಘ ಸಮನ್ವಯ ಸಮಿತಿಯು ಈ ಪ್ರತಿಭಟನೆಯಿಂದ ಈಗಿನಿಂದಲೇ ಹಿಂದೆ ಸರಿಯುತ್ತಿದೆ ಎಂದಿದ್ದರು.
ಇದರ ಬೆನ್ನಲ್ಲೇ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಠಾಕೂರ್ ಬಾನು ಪ್ರತಾಪ್ ಸಿಂಗ್ ಸಹ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ.