ವಾಷಿಂಗ್ಟನ್: ವಿಶ್ವದಲ್ಲೇ ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯಲ್ಲಿ ಭಾರತವೇ ನಿಜವಾದ ದೊಡ್ಡಣ್ಣ ಎಂಬುದರಲ್ಲಿ ಬೇರೆ ಮಾತೇ ಇಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜನರಲ್ ಆಂಟೋನಿಯೋ ಗುಟೆರ್ರೆಸ್ ಬಹಳ ಅಭಿಮಾನದ ಮಾತನಾಡಿದ್ದಾರೆ.
ದೊಡ್ಡ ಪ್ರಮಾಣದಲಸಿಕೆ ಉತ್ಪಾದನೆ ಮಾಡುವುದರ ಜೊತೆಗೆ ನೆರೆ, ಹೊರೆಯ ಇತರೆ ದೇಶಗಳಿಗೂ ಲಸಿಕೆ ಪೂರೈಕೆ ಮಾಡುತ್ತಿರುವ ಭಾರತದ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಭಾರತದ ವ್ಯಾಕ್ಸಿನ್ ಉತ್ಪಾದಕಾ ಸಾಮರ್ಥ್ಯ ಈ ಜಗತ್ತಿನ ಅತಿದೊಡ್ಡ ಆಸ್ತಿಯಾಗಿದೆ. ಇಡೀ ಜಗತ್ತು ಇದನ್ನ ಅರ್ಥೈಸಿಕೊಂಡು ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ ಎಂದರು. ಅಲ್ಲದೇ ಜಾಗತಿಕವಾಗಿ ವ್ಯಾಕ್ಸಿನೇಷನ್ ನಡೆಸಲು ಬೇಕಾಗುವ ಎಲ್ಲ ಸಲಕರಣೆಗಳನ್ನೂ ಭಾರತ ಹೊಂದಿದೆ ಎಂದೂ ಗುಟೆರ್ರೆಸ್ ಹೇಳಿಕೆ ನೀಡಿದ್ದಾರೆ.
ಕೊರೋನಾ ವಿರುದ್ಧ ಸಮರ, ಮೊದಲ ಡೋಸ್ ಲಸಿಕೆ ಪಡೆದ ಗುಟೆರಸ್!:
ಕೊರೊನ ಸೋಂಕಿನಿಂದ ಪಾರಾಗಲು ತಾವು ಲಸಿಕೆಯ ಮೊದಲ ಡೋಸ್ ಪಡೆದಿರುವುದಾಗಿ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಬಹಳ ಹೆಮ್ಮೆ, ಅಭಿಮಾನದಿಂದ ಹೇಳಿಕೊಂಡಿದ್ದಾರೆ.
ಕೊರೋನಾ ಲಸಿಕೆ ಪಡೆದಿದ್ದೇನೆ ಇಂದು ನನ್ನಪಾಲಿಗೆ ಸುದಿನ, ನಾನು ಅದೃಷ್ಟಶಾಲಿ ಇದಕ್ಕೆ ಕಾರಣವಾದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದೂ ಗುಟೆರೆಸ್ ಗುರುವಾರ ಟ್ವಿಟ್ಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಲಸಿಕೆ ಪ್ರಪಂಚದಾದ್ಯಂತ ಎಲ್ಲ ಜನತೆಗೂ ಲಭ್ಯವಾಗುವಂತೆ ನೋಡಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ಸಾಂಕ್ರಾಮಿಕ ದಿಂದ, ನಾವೆಲ್ಲರೂ ಸುರಕ್ಷಿತವಾಗಿರುವವರೆಗೂ ನಮ್ಮಲ್ಲಿ ಬೇರೆ ಯಾರೂ, ಇತರರು ಸುರಕ್ಷಿತವಾಗಿರಲು ಆಗದು ಆದ್ದರಿಂದ ಯಾರು ಭಯ, ಆತಂಕ ಪಡದೆ ಲಸಿಕೆ ಹಾಕಿಸಿಕೊಂಡು ಕೊರೋನಾ ತೊಲಗಿಸಬೇಕು ಎಂದೂ ಪ್ರಧಾನ ಕಾರ್ಯದರ್ಶಿ ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್ 11ರಂದು ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು.