ನವದೆಹಲಿ: ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಕಳೆದ 48 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ವಿವಾದಿತ 3 ಕಾಯ್ದೆಗಳಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್, ಸಮಸ್ಯೆ ಬಗೆಹರಿಕೆಗೆ ಸಮಿತಿಯೊಂದನ್ನು ಮಂಗಳವಾರ ರಚನೆ ಮಾಡಿದೆ.
ವಿವಾದಿತ ಕೃಷಿ ಮಸೂದೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು, ಯಾವುದೇ ಶಕ್ತಿಗೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಈಗಿರುವ ಸಮಸ್ಯೆಯನ್ನು ನಾವು ಇತ್ಯರ್ಥಪಡಿಸಲೇಬೇಕಾಗಿದೆ. ಅದ್ದರಿಂದ ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಸಮಿತಿಯಲ್ಲಿ ಕಾಯ್ದೆ ಕುರಿತ ಸಾಧಕ ಹಾಗೂ ಬಾಧಕಗಳ ಕುರಿತು ಚರ್ಚೆ ನಡೆಸುತ್ತೇವೆ. ರೈತರು ಈ ಕುರಿತಾಗಿ ನಮ್ಮೊಂದಿಗೆ ಸಹಕಾರ ನೀಡಬೇಕೆಂದು ಮುಖ್ಯ ನ್ಯಾಯಾಮೂರ್ತಿಗಳು ಹೇಳಿದ್ದಾರೆ.
ವಿಚಾರಣೆ ವೇಳೆ ಕಾಯ್ದೆ ಕುರಿತು ಈಗಾಗಲೇ ಸಾಕಷ್ಟು ಸಂಧಾನ ಸಭೆಗಳು ನಡೆದಿದೆ. ಹಲವು ನಾಯಕರು ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಪ್ರಧಾನಿ ಮೋದಿಯವರು ಮಾತ್ರ ಚರ್ಚೆ ನಡೆಸಲಿಲ್ಲ ಎಂದು ರೈತರು ಹೇಳುತ್ತಿದ್ದಾರೆಂದು ರೈತರ ಪರ ವಕೀಲ ಎಮ್ಎಲ್ ಶರ್ಮಾ ಅವರು ಹೇಳಿದರು.
ಈ ವೇಳೆ ಮಾತನಾಡಿರುವ ಮುಖ್ಯ ನ್ಯಾಯಮೂರ್ತಿಗಳು, ಪ್ರಧಾನಿಯನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ ಎಂದು ಹೇಳಲು ನಮಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ರೈತರ ಪರ ಪ್ರಮುಖ ವಕೀಲರು ಸುಪ್ರೀಂ ಕೋರ್ಟ್'ಗೆ ಹಾಜರಾಗದ ಕುರಿತು ಮುಖ್ಯ ನ್ಯಾಯಾಧೀಶರು ಅಸಮಧಾನ ವ್ಯಕ್ತಪಡಿಸಿದ್ದಾರೆ.