ನವದೆಹಲಿ: ದಕ್ಷಿಣ ಭಾರತೀಯರ ಉಪಾಹಾರಗಳಲ್ಲೊಂದು ಉಪ್ಪಿಟ್ಟು ಜನಪ್ರಿಯ.ಬೆಳಗ್ಗೆ ತರಾತುರಿಯಲ್ಲಿ ಏನು ಮಾಡುವುದು ಎಂದು ಯೋಚಿಸಿ ಉಪ್ಪಿಟ್ಟು ಮಾಡಿ ತಿಂದು ಹೊಟ್ಟೆ ತುಂಬಿಸಿಕೊಳ್ಳುವವರು ಅದೆಷ್ಟೋ ಮಂದಿ.ಅದೆಷ್ಟೋ ಬಡಜೀವಗಳ ಹೊಟ್ಟೆಯನ್ನು ಈ ಉಪ್ಪಿಟ್ಟು ತುಂಬಿಸುತ್ತದೆ.ಹಲವರು ಉಪ್ಪಿಟ್ಟು ಪ್ರಿಯ ತಿಂಡಿ ಎನ್ನುತ್ತಾರೆ. ಉಪ್ಪಿಟ್ಟಿನಲ್ಲಿ ನಾನಾ ವಿಧಗಳಿವೆ.
ಈ ಉಪ್ಪಿಟ್ಟು ಬಗ್ಗೆ ಮೊನ್ನೆಯಿಂದ ಭಾರೀ ಚರ್ಚೆ ನಡೆಯುತ್ತಿದೆ, ಟ್ವಿಟ್ಟರ್ ನಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಮಾಡಿರುವ ಒಂದು ಟ್ವೀಟ್. ಮೊನ್ನೆ 29ರಂದು ಸ್ವಿಗ್ಗಿ ಟ್ವೀಟ್ ಮಾಡಿ, ಅತ್ಯಂತ ಕೆಟ್ಟ ಉಪಾಹಾರ ಯಾವುದು, ಯಾಕೆ ಅದು ಉಪ್ಪಿಟ್ಟು ಎಂದು ಕೇಳಿತ್ತು.
ಅದು ಕೇಳಿದ್ದೇ ತಡ, ದಕ್ಷಿಣ ಭಾರತೀಯರು ಹಿಗ್ಗಾಮುಗ್ಗ ಸ್ವಿಗ್ಗಿ ಆಹಾರ ಡೆಲಿವರಿ ಆಪ್ ಕಂಪೆನಿಯನ್ನು ಬೈಯುತ್ತಿದ್ದಾರೆ, ಉಪ್ಪಿಟ್ಟು ಬಗ್ಗೆ ಅಷ್ಟು ಹಗುರವಾಗಿ ಮಾತನಾಡಬೇಡಿ, ಊಟ, ತಿಂಡಿ ವಿಚಾರದಲ್ಲಿ ದಕ್ಷಿಣ ಭಾರತೀಯರನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕೆಲವರು ಉತ್ತರ ಭಾರತ ತಿಂಡಿ ಜೊತೆ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ.