ಟೋಕಿಯೋ: ಬ್ರಿಟನ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ರೂಪಾಂತರಿ ಕೊರೋನಾ ವೈರಸ್ ನ ಮತ್ತೊಂದು ಜಪಾನ್ ನಲ್ಲಿ ಪತ್ತೆಯಾಗಿದ್ದು. ಅಚ್ಚರಿ ಎಂದರೆ ಬ್ರೆಜಿಲ್ ನಿಂದ ಜಪಾನ್ ಗೆ ಆಗಮಿಸಿದ್ದ ಪ್ರಯಾಣಿಕರಲ್ಲಿ ಈ 2ನೇ ಮಾದರಿಯ ಹೊಸ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಜಪಾನ್ ಸರ್ಕಾರ ಮಾಹಿತಿ ನೀಡಿದ್ದು, ಬ್ರೆಜಿಲ್ ನಿಂದ ಜಪಾನ್ ಗೆ ಬಂದ ಪ್ರಯಾಣಿಕರಲ್ಲಿ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದು ಈ ಹಿಂದೆ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ರೂಪಾಂತರಿ ವೈರಸ್ ಗಿಂತಲೂ ಭಿನ್ನವಾಗಿದೆ ಎಂದು ಹೇಳಿದೆ. ಟೋಕಿಯೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರೆಜಿಲ್ ನಿಂದ ಬಂದಿದ್ದ 40 ವರ್ಷದ ವ್ಯಕ್ತಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಇದು ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ರೂಪಾಂತರಿ ವೈರಸ್ ಗಿಂತಲೂ ಭಿನ್ನವಾಗಿದೆ. ಇದೇ ರೀತಿಯ ವೈರಸ್ ಮಾದರಿ 30 ವರ್ಷದ ಓರ್ವ ಮಹಿಳೆ ಮತ್ತು ಇಬ್ಬರು ಯುವತಿಯರಲ್ಲೂ ಪತ್ತೆಯಾಗಿದೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ರೂಪಾಂತರಿ ಕೊರೋನಾ ವೈರಸ್ ಪತ್ತೆಯಾದ ವ್ಯಕ್ತಿಯಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಗೋಚರಿಸುತ್ತಿಲ್ಲ. ಆದರೆ ವಿಮಾನ ನಿಲ್ಗಾಣದಲ್ಲಿ ಆತನ ಪರೀಕ್ಷೆ ನಡೆಸಿದ ಬಳಿಕ ಆವರಲ್ಲಿ ಉಸಿರಾಟದ ತೊಂದರೆ ಎದುರಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸೋಂಕು ಪತ್ತೆಯಾದ ಮಹಿಳೆ ಮತ್ತು ಯುವತಿಯರಲ್ಲಿ ತಲೆನೋವು, ಜ್ವರ ಕಾಣಿಸಿಕೊಂಡಿದೆ. ಓರ್ವ ಯುವತಿಯಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ ಎಂದು ಹೇಳಲಾಗಿದೆ.
ಜಗತ್ತಿನ ಇತರೆ ದೇಶಗಳಂತೆಯೇ ಜಪಾನ್ ಕೂಡ ಹೊಸ ಮಾದರಿಯ ರೂಪಾಂತರಿ ಕೊರೋನಾ ವೈರಸ್ ತಳಿಯ ಕುರಿತು ವ್ಯಾಪಕ ಸಂಶೋಧನೆ ನಡೆಸುತ್ತಿದ್ದು, ಈ ಸಂಬಂಧ ಆರೋಗ್ಯ ವಲಯದ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅಂತೆಯೇ ಪ್ರಸ್ತುತ ಲಭ್ಯವಿರುವ ಲಸಿಕೆಗಳು ಈ ರೂಪಾಂತರಿ ಕೊರೋನಾ ವೈರಸ್ ಮೇಲೆ ಪರಿಣಾಮಕಾರಿಯೋ ಇಲ್ಲವೋ ಎಂಬುದರ ಕುರಿತೂ ಅಧ್ಯಯನ ನಡೆಸಲಾಗುತ್ತಿದೆ.
ಜಪಾನ್ ನಲ್ಲಿ ಈ ವರೆಗೂ 30 ರೂಪಾಂತರಿ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಜಪಾನ್ ನಲ್ಲಿ ಸೋಂಕಿತರ ಸಂಖ್ಯೆ 280,000ಕ್ಕೂ ಹೆಚ್ಚಿದ್ದು, ಸುಮಾರು 4000 ಸಾವಿರ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.