ಜಿನಿವಾ: ಕೋವಿಡ್-19 ಲಸಿಕೆ ತಯಾರಕರು ಮತ್ತು ಅವುಗಳನ್ನು ಖರೀದಿಸುವ ಶ್ರೀಮಂತ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ.
ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಶ್ರೀಮಂತ ರಾಷ್ಟ್ರಗಳು ಲಸಿಕೆ ತಯಾರಕಾ ಸಂಸ್ಥೆಗಳ ಹಿಂದೆ ಬಿದ್ದಿದ್ದು, ಕೋಟ್ಯಂತರ್ ಲಸಿಕೆಗಳನ್ನು ಶ್ರೀಮಂತ ರಾಷ್ಟ್ರಗಳು ಖರೀದಿ ಮಾಡುತ್ತಿದೆ. ಇದರಿಂದ ಬಡರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಸರಿಯಾಗಿ ಆಗುವುದಿಲ್ಲ. ಅಲ್ಲದೆ 'ಕೊವಾಕ್ಸ್' ಯೋಜನೆ ಮೂಲಕ ಬಡ ರಾಷ್ಟ್ರಗಳಿಗೂ ಸರಿಸಮ ಹಾಗೂ ವ್ಯಾಪಕವಾಗಿ ಲಸಿಕೆ ಹಂಚುವ ವಿಶ್ವಸಂಸ್ಥೆಯ ಪ್ರಯತ್ನಗಳಿಗೆ ಹಿನ್ನೆಡೆಯುಂಟಾಗಲಿದೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ.
ಕೊವಾಕ್ಸ್ ಯೋಜನೆಯಡಿ ಹಿಂದುಳಿದ ಸೇರಿದಂತೆ ಎಲ್ಲ ರಾಷ್ಟ್ರಗಳಿಗೂ ಸಮಾನವಾಗಿ ಲಸಿಕೆ ತಲುಪಿಸುವ ಯೋಜನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೊಂದಿದ್ದು, ಶ್ರೀಮಂತ ಹಾಗೂ ಮಧ್ಯಮ ಆದಾಯದ ದೇಶಗಳು ಸೇರಿದಂತೆ 42 ದೇಶಗಳು ಇಂತಹ ಲಸಿಕೆಗಳನ್ನು ಹೊರತರುತ್ತಿವೆ. ಆದರೆ ಲಸಿಕೆಗಳನ್ನು ಸಮಾನವಾಗಿ ಹಂಚಲು ಕೊವಾಕ್ಸ್ ಯೋಜನೆಗೆ ಲಭ್ಯವಾಗುವಂತೆ ಮಾಡಬೇಕಾಗಿರುವುದರಿಂದ ಶ್ರೀಮಂತ ರಾಷ್ಟ್ರಗಳು ದ್ವಿಪಕ್ಷೀಯ ಒಪ್ಪಂದವನ್ನು ನಿಲ್ಲಿಸಬೇಕು ಎಂದು ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ತಿಳಿಸಿದರು.
ನಾವೀಗ ಕೊವಾಕ್ಸ್‌ನ ಭಾಗವಾಗಿರುವ ಶ್ರೀಮಂತ ಹಾಗೂ ಮಧ್ಯಮ ಆದಾಯದ ದೇಶಗಳು ದ್ವಿಪಕ್ಷೀಯ ಒಪ್ಪಂದವನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಇದರಿಂದ ಬೆಲೆ ಹೆಚ್ಚಳವಾಗಲಿದ್ದು, ಬಡ ಮತ್ತು ಬೇಡಿಕೆಯ ಜನರಿಗೆ ಲಸಿಕೆ ಸಿಗಲಾರದು. ಹಾಗಾಗಿ ಕೊವಾಕ್ಸ್ ವೆಚ್ಚದಲ್ಲಿ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡುವುದನ್ನು ನಿಲ್ಲಿಸುವಂತೆ ನಾನು ಶ್ರೀಮಂತ ದೇಶಗಳು ಹಾಗೂ ಔಷದಿ ತಯಾರಕರಿಗೆ ಮನವಿ ಮಾಡುತ್ತಿದ್ದೇನೆ. ಲಸಿಕೆ ತಯಾರಕರು ತಮ್ಮ ಲಸಿಕೆಗಳ ಡೇಟಾವನ್ನು ಲಭ್ಯವಾಗುವಂತೆ ಮಾಡಲು ಟ್ರೆಡೋಸ್ ಒತ್ತಾಯಿಸಿದರು. ಇದರಿಂದ ತುರ್ತು ಬಳಕೆಯ ಪಟ್ಟಿಗಳನ್ನು ಒದಗಿಸಲು ನೆರವಾಗಲಿದೆ ಎಂದು ಹೇಳಿದರು.