ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಶಿ ಸೇರಿದಂತೆ 32 ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಎರಡು ವಾರಗಳವರೆಗೆ ಮುಂದೂಡಿದೆ.
ಅರ್ಜಿದಾರರು ತಾವು ಸಲ್ಲಿಸಿರುವ ಅರ್ಜಿಯಲ್ಲಿರುವ ಕೆಲವೊಂದು ದೋಷಗಳನ್ನು ತೆಗೆಯಲು ಸಮಯ ನೀಡಬೇಕೆಂದು ಕೇಳಿದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಕೇಶ್ ಶ್ರೀವಾಸ್ತವ ಅವರನ್ನೊಳಗೊಂಡ ಲಖನೌ ಪೀಠ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಅಯೋಧ್ಯೆಯ ನಿವಾಸಿಗಳಾದ ಹಾಜಿ ಮಹಮೂದ್ ಅಹ್ಮದ್ ಮತ್ತು ಸೈಯದ್ ಅಖ್ಲಾಕ್ ಅಹ್ಮದ್ ಅವರು, ಬಾಬ್ರಿಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿರುವ ತೀರ್ಪು ಪ್ರಶ್ನಿಸಿ ಜನವರಿ 8 ರಂದು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯನಿರ್ವಾಹಕ ಸದಸ್ಯ ಜಫರ್ಯಾಬ್ ಜಿಲಾನಿ ಅವರು ಅರ್ಜಿದಾರರ ಸಲಹೆಗಾರರು ಮತ್ತು ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕರೂ ಆಗಿದ್ದಾರೆ. ಈ ಪ್ರಕರಣದ ಕುರಿತು ಕಳೆದ ವರ್ಷ ಸೆ. 30ರಂದು ನೀಡಿದ ತೀರ್ಪಿನ ವಿರುದ್ಧ ಸಿಬಿಐ ಇನ್ನೂ ಮೇಲ್ಮನವಿ ಸಲ್ಲಿಸದ ಕಾರಣ, ಇಬ್ಬರು ಅಯೋಧ್ಯೆ ನಿವಾಸಿಗಳು, ಆ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವುದಾಗಿ ಜಿಲಾನಿ ಹೇಳಿದ್ದಾರೆ. ಈ ಅರ್ಜಿದಾರರು, ತಾವು ಸಾಕ್ಷಿದಾರರು ಎಂದು ಹೇಳಿಕೊಂಡಿದ್ದಾರೆ.