ಕಾಸರಗೋಡು: ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಕಾರಣದಿಂದ ಸ್ಥಗಿತಗೊಂಡು ಆನ್‍ಲೈನ್ ಮೂಲಕ ಮುಂದುವರಿಯುತ್ತಿದ್ದ 10 ಮತ್ತು 12 ನೇ ತರಗತಿಗಳು ಸೋಮವಾರ ಶಾಲಾ ತರಗತಿಗಳೊಳಗೇ ಪುನರಾರಂಭಗೊಂಡಿತು.
ಕೋವಿಡ್ 19 ರ ನಿಬಂಧನೆಗಳಿಗೆ ಬದ್ಧವಾಗಿ ಪ್ರತಿಯೊಬ್ಬರಿಗೂ ಸಾನಿಟೈಸರ್, ಮಾಸ್ಕ್ ಹಾಗು ಅಂತರವನ್ನು ಕಾಯ್ದುಕೊಳ್ಳುವಿಕೆಯನ್ನು ಕಡ್ಡಾಯಗೊಳಿಸಲಾಗಿತ್ತು. ನುರಿತ ಆಯುರ್ವೇದ ವೈದ್ಯರ ಸಲಹೆಯಂತೆ ರೋಗ ಪ್ರತಿರೋಧಕ ಶಕ್ತಿಯನ್ನು ವರ್ಧಿಸುವ ಸಲುವಾಗಿ ಗಿಡಮೂಲಿಕೆಗಳಿಂದ ಸಿದ್ಧಗೊಳಿಸಿದ ಕಷಾಯವನ್ನು ವಿದ್ಯಾರ್ಥಿಗಳಿಗೂ ಇತರ ಸಿಬಂದಿ ವರ್ಗದವರಿಗೂ ಉಚಿತವಾಗಿ ವಿತರಿಸುವ ಏರ್ಪಾಡು ಮಾಡಲಾಯಿತು.
ವಿದ್ಯಾರ್ಥಿಗಳ ಆರೋಗ್ಯ ಸಂರಕ್ಷಣೆಯ ಬಗ್ಗೆ ವಿದ್ಯಾಲಯ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಅಕಡೆಮಿಕ್ ಡೆರೆಕ್ಟರ್/ಪ್ರಾಂಶುಪಾಲೆ ರಾಧಾ ಎಂ.ಕೆ.ನಾಯರ್. ಡೈರೆಕ್ಟರ್ ಬಿ.ಪುಷ್ಪರಾಜ್, ಉಪಪ್ರಾಂಶುಪಾಲೆ ಸಂಗೀತ ಪ್ರಭಾಕರನ್ ಹಾಗು ಅಧ್ಯಾಪಕರು ಅತೀವ ಕಾಳಜಿ ವಹಿಸುತ್ತಿರುವರು.
ಸಹಪಾಠಿಗಳಿಂದ ಹಾಗು ಶಾಲಾ ವಾತಾವರಣದಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳು ತರಗತಿಯೊಳಗೆ ಪ್ರವೇಶಿಸುತ್ತಿದ್ದಂತೆ ತಮ್ಮ ಸ್ನೇಹಿತರನ್ನು ಕಂಡು ಸಂತಸದ ಅನುಭೂತಿ ಹೊಂದಿದರು.