ಬೆಂಗಳೂರು: ಕೋವಿಡ್ ಲಸಿಕೆಯಿಂದ ಮಾತ್ರ ಕೊರೋನಾ ವೈರಸ್ ಸಾಂಕ್ರಾಮಿಕವನ್ನು ಅಂತ್ಯಗೊಳಿಸಬಹುದು ಎಂದು ಖ್ಯಾತ ಹೃದ್ರೋಗ ತಜ್ಞ, ಕರ್ನಾಟಕ ಕೋವಿಡ್-19 ಕಾರ್ಯಪಡೆ ಸಮಿತಿ ಸದಸ್ಯರು ಹಾಗೂ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಸಂಬಂಧ ದೇಶವ್ಯಾಪಿ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಕೈಜೋಡಿಸಿರುವ ಡಾ.ಸಿ.ಎನ್.ಮಂಜುನಾಥ್ ಅವರು ಗುರುವಾರ ಲಸಿಕೆ ಪಡೆದರು. ಬಳಿಕ ಲಸಿಕೆ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, 'ಲಸಿಕೆ ತೆಗೆದುಕೊಳ್ಳುವುದು ನಾಗರಿಕರ ಜವಾಬ್ದಾರಿ ಆಗಿದ್ದು, ಲಸಿಕೆ ತೆಗೆದುಕೊಳ್ಳುವುದರಿಂದ ನಾವು ಈ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಬಹುದು ಎಂದರು.
ಅಂತೆಯೇ ನಾನು ಲಸಿಕೆ ಪಡೆದು ಚೆನ್ನಾಗಿದ್ದು, ಆರೋಗ್ಯ ಕಾರ್ಯಕರ್ತರು ವ್ಯಾಕ್ಸಿನೇಷನ್ ಕುರಿತು ಭಯ ಮತ್ತು ಆತಂಕವಿಲ್ಲದೆ ಸ್ವಯಂ ಪ್ರೇರಿತರಾಗಿ ಈ ಅಭಿಯಾನದಲ್ಲಿ ಕೈಜೋಡಿಸಬೇಕು. ಏಕೆಂದರೆ ಇದು ಸುರಕ್ಷಿತವಾಗಿದೆ ಮತ್ತು ಯಾವುದೇ ದೊಡ್ಡ ಅನಾಹುತ ನಡೆಯಲ್ಲ. ಲಸಿಕೆ ಸುರಕ್ಷಿತವಾಗಿದೆ ಮತ್ತು ಯಾವುದೇ ಅಡ್ಡ ಪರಿಣಾಮ ಇಲ್ಲ. ಸ್ವಲ್ಪ ಜ್ವರ, ಇಂಜೆಕ್ಷನ್ ಹಾಕಿದ ಸ್ಥಳದಲ್ಲಿ ನೋವು ಮತ್ತು ಅಲರ್ಜಿ ಕಾಣಿಸಿಕೊಂಡರೆ ಅದು ಅಡ್ಡಪರಿಣಾಮಗಳಲ್ಲ. ಅವು ಲಸಿಕೆಯ ಪರಿಣಾಮಗಳು ಮಾತ್ರ. ಅದರಿಂದ ಏನೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಲಸಿಕೆ ವಿತರಣಾ ಕಾರ್ಯಕ್ರಮ ಆರಂಭವಾದ ದಿನದಿಂದ ಈ ವರೆಗೂ ರಾಜ್ಯದಲ್ಲಿ ಒಟ್ಟು 1,17,407 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.