ನವದೆಹಲಿ: 130 ಕೋಟಿ ಭಾರತೀಯರ ಬಹುಸಮಯದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದೊದಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ದೇಶವ್ಯಾಪಿ ಕೊರೋನಾ ಲಸಿಕೆ ಅಭಿಯಾನಕ್ಕೆ ಆನ್'ಲೈನ್ ಮೂಲಕ ಚಾಲನೆ ನೀಡಿದ್ದಾರೆ. ಇದರಿಂದ ಇಡೀ ವಿಶ್ವವನ್ನೇ ಕಾಡಿದ ಕೊರೋನಾ ಸೋಂಕು ನಿಯಂತ್ರಣಕ್ಕೆ ಒಂದೇ ವರ್ಷದಲ್ಲಿ ಭಾರತ ದಿಟ್ಟ ಹೆಜ್ಜೆ ಇಟ್ಟಂತಾಗಿದೆ.
ಮೊದಲ ದಿನ ದೇಶದ 3006 ಲಸಿಕಾ ಕೇಂದ್ರಗಳಲ್ಲಿ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗುತ್ತಿದೆ.
ಭಾರತದಲ್ಲಿ ತಯಾರಿಸಿದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆ, ಭಾರತದ ಬಯೋಟೆಕ್ ದೇಶದ ಉನ್ನತ ಕ್ಲಿನಿಕಲ್ ಸಂಶೋಧನಾ ಸಂಸ್ಥೆಯೊಂದಿಗೆ ಸೇರಿ ತಯಾರಿಸಿದ ಕೋವ್ಯಾಕ್ಸಿನ್ ಅನ್ನು ಲಸಿಕೆ ಅಭಿಯಾನದಲ್ಲಿ ಬಳಕೆ ಮಾಡಲಾಗುತ್ತಿದೆ.
ಲಸಿಕೆ ಚಾಲನೆ ನೀಡಿದ ಬಳಿಕ ಮೋದಿಯವರು ಜನಸಾಮಾನ್ಯರು ಲಸಿಕೆ ಪಡೆಯಲು ಕಡ್ಡಾಯವಾಗಿರುವ ಕೋ-ವಿನ್ ಆ್ಯಪ್'ಗೂ ಚಾಲನೆ ನೀಡಿದ್ದಾರೆ.
ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿರುವ ಮೋದಿಯವರು, ಇಡೀ ವಿಶ್ವವೇ ಇಂದು ಭಾರತದ ಕಡೆ ತಿರುಗಿ ನೋಡುತ್ತಿದೆ. ಲಸಿಕೆ ಯಾವಾಗ ದೊರೆಯುತ್ತದೆ ಎಂದು ಎಲ್ಲರೂ ಕೇಳುತ್ತಿದ್ದರು. ಇದೀಗ ಅದು ದೊರೆತಿದೆ. ಈ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.
ಸಾಮಾನ್ಯವಾಗಿ ಒಂದು ಲಸಿಕೆ ಕಂಡು ಹಿಡಿಯಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶೀ ನಿರ್ಮಿತ ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ಎರಡು ಲಸಿಕೆಗಳು ಬಹಳ ಮುಖ್ಯವೆಂದು ನಾನು ದೇಶದ ಜನರಿಗೆ ಹೇಳಲು ಬಯಸುತ್ತೇನೆ. ಎರಡೂ ವ್ಯಾಕ್ಸಿನೇಷನ್‌ಗಳ ನಡುವೆ ಒಂದು ತಿಂಗಳ ಅಂತರವಿರಬೇಕು ಎಂದು ತಜ್ಞರು ಹೇಳಿದ್ದಾರೆಂದಿದ್ದಾರೆ.