ಶಬರಿಮಲೆ: ಪೊನ್ನಂಬಲ ಬೆಟ್ಟದಲ್ಲಿ ಪ್ರಕಾಶಮಾನವಾದ ಬೆಳಕಿನ ಪುಂಜದ ದರ್ಶನದೊಂದಿಗೆ ಶಬರಿಮಲೆ ಸನ್ನಿಧಿಯಲ್ಲಿ ನೆರೆದಿದ್ದ ಸೀಮಿತ ಪ್ರಮಾಣದ ಭಕ್ತರು ಕೃತಾರ್ಥರಾದರು. ಪಂದಳಂ ವಲಿಯ ಕೋವಿಲ್ ಅರಮನೆಯಿಂದ ಆಗಮಿಸಿದ ಪವಿತ್ರ ಆಭರಣ(ತಿರುವಾಭರಣಂ)ದಿಂದ ಅಲಂಕರಿಸಿ ಅಯ್ಯಪ್ಪ ಸ್ವಾಮಿಗೆ ದೀಪಾರಾಧನೆ ನಡೆಸುತ್ತಿರುವಂತೆ ಪೊನ್ನಂಬಳ ಬೆಟ್ಟದಲ್ಲಿ ಗುರುವಾರ ಸಂಜೆ ಮಕರ ಬೆಳಕು ದರ್ಶನಗೊಂಡಿತು.
ಪೊನ್ನಂಬಲ ಬೆಟ್ಟದಲ್ಲಿ ಮೂರು ಬಾರಿ ಬೆಳಗಿದ ಮಕರ ಬೆಳಕನ್ನು ಧನ್ಯತೆಯಿಂದ ವೀಕ್ಷಿಸಿದ ಭಕ್ತರು ಹಿಂತಿರುಗಿದರು. ಲಕ್ಷಾಂತರ ಜನರು ವೀಕ್ಷಿಸಿ ಧನ್ಯರಾಗುತ್ತಿದ್ದ ಮಕರ ಬೆಳಕೆಂಬ ಕೌತುಕವನ್ನು ಈ ಬಾರಿ ಕೇವಲ ಐದು ಸಾವಿರ ಮಂದಿ ಮಾತ್ರ ವೀಕ್ಷಿಸಿದರು.
ತಿರುವಾಂಕೂರು ಅರಮನೆಯಿಂದ ತರಲಾದ ತುಪ್ಪದೊಂದಿಗಿನ ಅಭಿಷೇಕದೊಂದಿಗೆ ಮಕರ ಸಂಕ್ರಮಣ ಪೂಜೆ ನೆರವೇರಿಸಲಾಗುತ್ತದೆ. ತಂತ್ರಿವರ್ಯ ಕಂಠರರ್ ರಾಜೀವರ್ ನೇತೃತ್ವದಲ್ಲಿ ವಿಧಿವಿಧಾನಗಳು ನೆರವೇರಿದವು. ಸಚಿವ ಕಡಗಂಪಳ್ಳಿ ಸುರೇಂದ್ರನ್, ದೇವಸ್ವಂ ಬೋರ್ಡ್ ಅಧ್ಯಕ್ಷ ಎಲ್.ವಾಸು ಮೊದಲಾದವರು ಉಪಸ್ಥಿತರಿದ್ದರು.