ಪಾಟ್ನಾ: ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಮೊದಲ ಪ್ರಧಾನಿ ನರೇಂದ್ರ ಮೋದಿ ಅವರೇ ಪಡೆಯಲಿ, ಆ ಮೂಲಕ ಜನರಲ್ಲಿ ಲಸಿಕೆ ಕುರಿತು ವಿಶ್ವಾಸ ಮೂಡಿಸಲಿ ಎಂದು ಕಾಂಗ್ರೆಸ್ ಪಕ್ಷದ ಭಾಗಲ್ಪುರ ಶಾಸಕ ಅಜಿತ್ ಶರ್ಮಾ ಹೇಳಿದ್ದಾರೆ.
ಈಗಾಗಲೇ ರಷ್ಯಾ, ಇಸ್ರೇಲ್ ಮತ್ತು ಅಮೆರಿಕ ಪ್ರಧಾನಿಗಳು ತಮ್ಮ ದೇಶದ ಕೋವಿಡ್ ಲಸಿಕೆಗಳನ್ನು ಪಡೆಯುವ ಮೂಲಕ ಲಸಿಕೆಯ ಸುರಕ್ಷತೆ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಆದರೆ ಭಾರತದಲ್ಲಿ ಈ ಕೆಲಸವಾಗಿಲ್ಲ. ಭಾರತೀಯ ಜನತಾಪಾರ್ಟಿ (ಬಿಜೆಪಿ) ಪಕ್ಷಹದ ನಾಯಕರೇ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಕೋವಿಡ್ ಲಸಿಕೆ ಪಡೆಯಲಿ. ಆ ಮೂಲಕ ಲಸಿಕೆಯ ಕುರಿತು ಜನರಲ್ಲಿ ಮೂಡಿರುವ ಭಯವನ್ನು ಹೋಗಲಾಡಿಸಲಿ ಎಂದು ಹೇಳಿದರು.
ಲಸಿಕೆ ಕಂಡು ಹಿಡಿದ ದೇಶದ ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಖಂಡಿತಾ ಇದೆ. ಆದರೆ ಲಸಿಕೆ ಸಾಮರ್ಥ್ಯ ಮತ್ತು ಕಾರ್ಯನಿರ್ವಹಣೆ, ಪರಿಣಾಮಕಾರಿತ್ವದ ಕುರಿತಂತೆ ಸಾಕಷ್ಟು ಅನುಮಾನಗಳೂ ಕೂಡ ಇವೆ. ಹೀಗಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಮೊದಲ ತಾವೇ ಲಸಿಕೆ ಪ್ರಯೋಗಕ್ಕೆ ಒಳಗಾಗುವ ಮೂಲಕ ಲಸಿಕೆಯ ಕುರಿತ ಅನುಮಾನಗಳನ್ನು ಶಮನ ಮಾಡಬೇಕು ಎಂದು ಹೇಳಿದರು.
ಅಂತೆಯೇ ಲಸಿಕೆ ತಯಾರಿಕೆಯ ಫಲ ಬಿಜೆಪಿ ಸರ್ಕಾರದ್ದಲ್ಲ ಎಂದು ಹೇಳಿದ ಅಜಿತ್ ಶರ್ಮಾ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಗಳ ಸ್ಥಾಪನೆಗೆ ಕಾಂಗ್ರೆಸ್ ಪಕ್ಷ ಕಾರಣ. ಕಾಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ಉಭಯ ಸಂಸ್ಥೆಗಳು ಸ್ಖಾಪನೆಯಾಯಿತು. ಹೀಗಾಗಿ ಲಸಿಕೆ ಅಭಿವೃದ್ಧಿಯ ಶ್ರೇಯ ಕಾಂಗ್ರೆಸ್ ಪಕ್ಷಕ್ಕೇ ಸಲ್ಲಬೇಕು ಎಂದು ಹೇಳಿದರು.
ದೇಶದ ಸಾಮರ್ಥ್ಯದ ಬಗ್ಗೆ ಕಾಂಗ್ರೆಸ್ ಗೆ ಅನುಮಾನ: ಬಿಜೆಪಿ ತಿರುಗೇಟು
ಇನ್ನು ಕಾಂಗ್ರೆಸ್ ನಾಯಕ ಅಜಿತ್ ಶರ್ಮಾ ಅವರ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ದೇಶದ ವೈಜ್ಞಾನಿಕ ಸಾಮರ್ಥ್ಯವನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ದೇಶಕ್ಕೆ ಅಪಮಾನ ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕರಾದ ಡಾ. ಸಂಜಯ್ ಜೈಸ್ವಾಲ್ ಮತ್ತು ನಿಖಿಲ್ ಆನಂದ್ ಅವರು, ಅಜಿತ್ ಶರ್ಮಾ ಅವರ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮೊದಲು ಲಸಿಕೆ ಹಾಕಿಸಿಕೊಂಡು ಅದರ ಸುರಕ್ಷತೆ ಬಹಿರಂಗ ಮಾಡಿ ಎನ್ನುವ ಮೂಲಕ ಕಾಂಗ್ರೆಸ್ ಮುಖಂಡರು ದೇಶದ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದಾರೆ. ಶರ್ಮಾ ಈ ಲಸಿಕೆಗಳನ್ನು ಪಾಕಿಸ್ತಾನ ನಿರ್ಮಿಸಿದ್ದರೆ ಖಂಡಿತಾ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ ದೇಶದ ವಿಜ್ಞಾನಿಗಳ ಶ್ರಮವನ್ನು ಅವರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಜೆಡಿಯು ವಕ್ತಾರ ರಾಜೀವ್ ರಂಜನ್ ಪ್ರಾಸಾ ಅವರು ಕೂಡ ಅಜಿತ್ ಶರ್ಮಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾರೂ ಕೂಡ ಕೊರೋನಾ ಲಸಿಕೆ ಸಂಬಂಧ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಮತ್ತು ಲಸಿಕೆ ಕುರಿತಂತೆ ತಪ್ಪು ಮಾಹಿತಿಗಳನ್ನು ಪ್ರಸರಣ ಮಾಡಬಾರದು. ಕೋವಿಡ್ ಲಸಿಕೆಗಳು ದೇಶದ ಎಲ್ಲ ಪ್ರಜೆಗಳ ಆಸ್ತಿ ಎಂದು ಹೇಳಿದರು.