ಜಿನೇವಾ:ಕೊರೋನಾ ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಚೀನಾಗೆ ಡಬ್ಲ್ಯುಹೆಚ್ಒ ತಜ್ಞರ ತಂಡ ಚೀನಾಗೆ ಗುರುವಾರ (ಜ.14 ರಂದು) ಭೇಟಿ ನೀಡಲಿದೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಬಗ್ಗೆ ಒಂದು ಸಾಲಿನ ಹೇಳಿಕೆ ಬಿಡುಗಡೆ ಮಾಡಿದ್ದು, ಡಬ್ಲ್ಯುಹೆಚ್ಒ ತಜ್ಞರ ತಂಡ ಗುರುವಾರ ಚೀನಾಗೆ ಆಗಮಿಸುವ ಸಾಧ್ಯತೆ ಇದ್ದು ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದಷ್ಟೇ ಮಾಹಿತಿ ಬಹಿರಂಗಪಡಿಸಿದೆ.
ತಜ್ಞರ ತಂಡ ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದ ವುಹಾನ್ ಗೆ ತೆರಳುತ್ತಾರೋ ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಇಲ್ಲ. ವುಹಾನ್ ಗೆ ತೆರಳುವುದಕ್ಕೆ ಡಬ್ಲ್ಯುಹೆಚ್ಒ ತಂಡ ನಿರಂತರವಾಗಿ ಮನವಿ ಸಲ್ಲಿಸುತ್ತಲೇ ಇದ್ದು, ಅನುಮತಿ ನಿರಾಕರಿಸುತ್ತಿರುವುದಕ್ಕೆ ಡಬ್ಲ್ಯುಹೆಚ್ಒ ಮುಖ್ಯಸ್ಥರು ಚೀನಾ ನಡೆಗೆ ಕಳೆದ ವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆ ನಡೆಸುವುದಕ್ಕೆ ಚೀನಾ ಆಂತರಿಕವಾಗಿ ನಿರ್ಬಂಧ ವಿಧಿಸಿತ್ತು. ಆಸ್ಟ್ರೇಲಿಯಾ ಹಾಗೂ ಇತರ ರಾಷ್ಟ್ರಗಳು ಕೊರೋನಾ ಮೂಲದ ಬಗ್ಗೆ ತನಿಖೆ ನಡೆಸುವುದಕ್ಕೆ ಆಗ್ರಹಿಸುತ್ತಿವೆ.