ಕಾಸರಗೋಡು: ಗೆಳೆಯನೊಬ್ಬನಿಗೆ ಸಾಲಪಡೆಯಲು ಜಾಮೀನು ನಿಂತು ಪೇಚಿಗೆ ಸಿಲುಕಿ ಸಂಕಷ್ಟಕ್ಕೊಳಗಾದ ಸರ್ಕಾರಿ ಉದ್ಯೋಗಿಯೋರ್ವ ಕೊನೆಗೆ ಏಕವ್ಯಕ್ತಿಯಾಗಿ ಪ್ರತಿಭಟನೆಗೆ ಇಳಿದ ಘಟನೆ ಶುಕ್ರವಾರ ಕಾಸರಗೋಡಲ್ಲಿ ನಡೆದಿದೆ.
ಕಾಸರಗೋಡು-ಸುಳ್ಯ ಅಂತರ್ ರಾಜ್ಯ ರಸ್ತೆಯ ಕೆ.ಎಸ್.ಆರ್.ಟಿ.ಸಿ ಚಾಲಕ ಮತ್ತು ಮೊಗ್ರಾಲ್ ಪುತ್ತೂರು ನಿವಾಸಿ ಪಿ.ಕೆ.ಶಂಸುದ್ದೀನ್ (49) ಅವರು ಶುಕ್ರವಾರ ಬೆಳಿಗ್ಗೆ ಕಾಸರಗೋಡು ಕೆ.ಎಸ್.ಆರ್.ಟಿ.ಸಿ ಡಿಪೆÇೀದ ಎರಡನೇ ಮಹಡಿಯಲ್ಲಿರುವ ಜಿಲ್ಲಾ ಸಾರಿಗೆ ಅಧಿಕಾರಿ ಕಚೇರಿಯ ಮುಂದೆ ಏಕಾಂಗಿಯಾಗಿ ಹತಾಶ ಭಾವದ ಪ್ರತಿಭಟನೆ ನಡೆಸಿದರು.
ಲಾಟರಿ ಅಂಗಡಿಯೊಂದನ್ನು ಪ್ರಾರಂಭಿಸಲು ಶಂಸುದ್ದೀನ್ ಅವರ ಸ್ನೇಹಿತ ಕೊಟ್ಟಕುನ್ನಿನ ಸುದರ್ಶನ್ ಎಂಬವರು ಜಿಲ್ಲಾ ಸಹಕಾರಿ ಬ್ಯಾಂಕಿನಿಂದ 2 ಲಕ್ಷ ರೂ.ಸಾಲಪಡೆದಿದ್ದರು. ಆ ಸಾಲಕ್ಕೆ ಶಂಸುದ್ದೀನ್ ಎರಡು ವರ್ಷಗಳ ಹಿಂದೆ ಜಾಮೀನು ನೀಡಿದ್ದರು. ಈ ಮಧ್ಯೆ ಸುದರ್ಶನ್ ಒಂದು ಲಕ್ಷ ರೂಪಾಯಿಗಳನ್ನು ಮರುಪಾವತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೆಲವು ತಿಂಗಳ ಹಿಂದೆಯೇ ಸುದರ್ಶನ್ ಗೆ ಕೋವಿಡ್ ರೋಗನಿರ್ಣಯ ಮಾಡಲಾಗಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಹಲವಾರು ದಿನಗಳವರೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಳಿಕ ಸಾವನ್ನಪ್ಪಿದರು. ಚಿಕಿತ್ಸೆಗೆ ಸುಮಾರು 6 ಲಕ್ಷ ರೂ.ಖರ್ಚು ತಗಲಿತ್ತೆಂದು ಮಾಹಿತಿ.
ಸಂಬಳದಿಂದ ತಿಂಗಳಿಗೆ ಹತ್ತು ಸಾವಿರ ರೂಪಾಯಿ ಕಟ್:
ಸುದರ್ಶನ್ ಸಾವಿನ ನಂತರ ಬ್ಯಾಂಕ್ ಅಧಿಕಾರಿಗಳು ಜಾಮೀನು ನಿಂತಿದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೋದರು. ಇದರ ಹಿಂದೆಯೇ ಶಂಸುದ್ದೀನರಿಗೆ ಸೊತ್ತು ಮರುಸ್ವಾಧೀನ ಸೂಚನೆ ನೀಡಲಾಯಿತು. ಜೊತೆಗೆ ಸಾಲ ಪಾವತಿಸದ ಕಾರಣ ತಿಂಗಳಿಗೆ 10,000 ರೂಗಳನ್ನು ಶಂಸುದ್ದೀನ್ ಸಂಬಳದಿಂದ ಕಡಿತಗೊಳಿಸಲಾಗುತ್ತಿದೆ ಎಂದು ಅವಲತ್ತುಕೊಳ್ಳಲಾಗಿದೆ. ಶಂಸುದ್ದೀನರ ಖಾಸಗಿ ಸಾಲ ಮರುಪಾವತಿ, ಮನೆ ಬಾಡಿಗೆ ಮತ್ತು ಇತರ ವೆಚ್ಚಗಳಿಂದಾಗಿ ಶಂಸುದ್ದೀನ್ ತೀವ್ರ ಸಂಕಷ್ಟದಲ್ಲಿದ್ದಾರೆ. ಸಂಬಂಧಪಟ್ಟವರಿಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇದೀಗ ಮುಷ್ಕರಕ್ಕೆ ಮುಂದಾಗಬೇಕಾಯಿತೆಂದು ಶಂಸುದ್ದೀನ್ ಹೇಳಿದ್ದಾರೆ. 13 ವರ್ಷಗಳಿಂದ ಕಾಸರಗೋಡು ಡಿಪೆÇೀದಲ್ಲಿ ಕೆಲಸ ಮಾಡುತ್ತಿರುವ ಶಂಸುದ್ದೀನ್, ಟ್ರಾನ್ಸ್ ಪೋರ್ಟ್ ಡೆಮೋಕ್ರೆಟಿಕ್ ನ ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ.
ಕೆ.ಎಸ್.ಆರ್.ಟಿ.ಸಿ.ಯ ಪ್ರತಿಕ್ರಿಯೆ:
ಜಿಲ್ಲಾ ಸಾರಿಗೆ ಅಧಿಕಾರಿ ಮನೋಜ್ ಕುಮಾರ್ ಮಾತನಾಡಿ, ಶಂಸುದ್ದೀನ್ ಅವರ ಪ್ರತಿಭಟನೆಯು ಬ್ಯಾಂಕಿನ ಸಾಮಾನ್ಯ ಕಾನೂನು ಕ್ರಮಗಳ ತಿಳುವಳಿಕೆಯ ಕೊರತೆಯಿಂದ ಮತ್ತು ಇಂತಹ ಪ್ರತಿಭಟನೆ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಹೇಳಿದರು. 2008 ರಲ್ಲಿ ಅವರು ತೆಗೆದುಕೊಂಡ ಸಾಲದ ಮೇಲಿನ ಬಡ್ಡಿಯಾಗಿ 8000 ಮತ್ತು ಇನ್ನೊಬ್ಬ ವ್ಯಕ್ತಿಗೆ ಜಾಮೀನು ನೀಡಿದ್ದರ ಭಾಗವಾಗಿ 10000 ರೂ.ಸೇರಿ ಒಟ್ಟು ರೂ.18,000 ರೂ.ಗಳು ಅವರ ಸಂಬಳದಿಂದ ಕೇರಳ ಬ್ಯಾಂಕ್ ಜಿಲ್ಲಾ ಕಚೇರಿಗೆ ಮರುಪಾವತಿಯಾಗುತ್ತಿದೆ. ಬ್ಯಾಂಕ್ ಹಲವಾರು ಬಾರಿ ನೋಟಿಸ್ ಕಳುಹಿಸಿದ ಬಳಿಕವೂ ಸ್ಪಷ್ಟ ಉತ್ತರಗಳಿಲ್ಲದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿರುವರು.