ನವದೆಹಲಿ: ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಸೈನಿಕರ ನಡುವೆ ಮತ್ತೊಮ್ಮೆ ಸಂಘರ್ಷ ನಡೆದಿದೆ. ರಾಜತಾಂತ್ರಿಕ ಮಾತುಕತೆಯ ಮೂಲಕ ಸ್ಥಳೀಯ ಕಮಾಂಡರ್‌ಗಳು ಈ ವಿವಾದವನ್ನು ಬಗೆಹರಿಸಿದ್ದಾರೆ. ಇದೊಂದು ಸಣ್ಣ ಸಂಘರ್ಷ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ.
ಜನವರಿ 20ರಂದು ಉತ್ತರ ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಪಡೆಯ ಯೋಧರು ಕೈ-ಕೈ ಮಿಲಾಯಿಸಿದ್ದಾರೆ. ಉಭಯ ಸೇನೆಗಳ ಯೋಧರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಪೂರ್ವ ಲಡಾಖ್‌ನಲ್ಲಿನ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಲು ಉಭಯ ದೇಶಗಳ ಸೇನಾ ಪಡೆಗಳ ಹಿರಿಯ ಕಮಾಂಡರ್‌ಗಳು ಭಾನುವಾರ ಮತ್ತು ಸೋಮವಾರ ನಡೆಸಿದ ಸುಮಾರು 16 ಗಂಟೆಗಳ ಮಾತುಕತೆ ಮುಕ್ತಾಯಗೊಂಡ ಬಳಿಕ ಸೋಮವಾರ ನಾಕು ಲಾ ಸಂಘರ್ಷ ವಿಷಯ ಬಹಿರಂಗಗೊಂಡಿದೆ.
ಸಿಕ್ಕಿಂನ ವಾಸ್ತವ ಗಡಿ ಪ್ರದೇಶದಲ್ಲಿ (ಎಲ್‌ಎಸಿ) ಚೀನಾ ಪಡೆಗಳು ಭಾರತದ ನಾಕು ಲಾ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದವು. ಚೀನಾ ಅತಿಕ್ರಮಣವನ್ನು ಭಾರತೀಯ ಯೋಧರು ತಡೆದರು. ಈ ವೇಳೆ ಎರಡು ಕಡೆಯ ಸೇನೆಗಳು ಮುಖಾಮುಖಿ
ಯಾದವು ಎಂದು ಮೂಲಗಳು ತಿಳಿಸಿವೆ.
ಈ ಸಂಘರ್ಷದಿಂದಾಗಿ ಉಭಯ ದೇಶಗಳು ಹೆಚ್ಚಿನ ಪಡೆಗಳನ್ನು ನಾಕು ಲಾ ಪ್ರದೇಶದಲ್ಲಿ ನಿಯೋಜಿಸಿವೆ. ಪರಿಸ್ಥಿತಿಯು ಸದ್ಯ ನಿಯಂತ್ರಣದಲ್ಲಿದೆ. ಈ ಘಟನೆಯ ಬಗ್ಗೆ ರಕ್ಷಣಾ ಸಚಿವರಿಗೆ ಮತ್ತು ಸೇನೆಯ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿವೆ.
'ಈ ನಿರ್ದಿಷ್ಟ ಘಟನೆಯ ಬಗ್ಗೆ ಯಾವುದೇ ಮಾಹಿತಿ ನನ್ನ ಬಳಿ ಇಲ್ಲ. ಭಾರತದ ಜತೆಗಿನ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಚೀನಾ ಪಡೆಗಳು ಬದ್ಧವಾಗಿವೆ' ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ತಿಳಿಸಿದ್ದಾರೆ.
ಕಳೆದ ವರ್ಷ ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರ ದಂಡೆಯಲ್ಲಿ ನಡೆದ ಸಂಘರ್ಷದ ಬಳಿಕ ಮೇ 9ರಂದು ಇದೇ ನಾಕು-ಲಾ ಪ್ರದೇಶದಲ್ಲಿ ಉಭಯ ಪಡೆಗಳು ಮುಖಾಮುಖಿಯಾಗಿದ್ದವು.
ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಯ ಮೂಲಕ ವಿವಾದ ಬಗೆ ಹರಿಸಲು ನಿರಂತರ ಪ್ರಯತ್ನ ನಡೆಸುತ್ತಿರುವ ಮಧ್ಯೆ ಪೂರ್ವ ಲಡಾಕ್ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಸೇನೆಗಳು ಗಡಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿ
ವೆ. ಸುಮಾರು 1ಲಕ್ಷ ಯೋಧರನ್ನು ಉಭಯ ದೇಶಗಳು ನಿಯೋಜಿಸಿವೆ ಎಂದು ಹೇಳಲಾಗಿದೆ.
ಸೇನಾ ಪಡೆಗಳ ವಾಪಸ್‌ಗೆ ಒಪ್ಪಿಗೆ
ನವದೆಹಲಿ: ಪೂರ್ವ ಲಡಾಖ್ ಭಾಗದಿಂದ ಸೇನಾ ತುಕಡಿಗಳನ್ನು ಸಾಧ್ಯವಾದಷ್ಟು ಶೀಘ್ರ ವಾಪಸ್ ಕರೆಯಿಸಿಕೊಳ್ಳುವ ಕುರಿತಂತೆ ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ.
ಗಡಿ ವಿವಾದ ಕುರಿತಂತೆ ನಡೆದ ಒಂಬತ್ತನೇ ಸುತ್ತಿನ ಸೇನಾ ಕಮಾಂಡರ್‌ಗಳ ಮಾತುಕತೆ ಸಂದರ್ಭದಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ.
'ಮಾತುಕತೆಯು ಸಕಾರಾತ್ಮಕ ಮತ್ತು ರಚನಾತ್ಮಕವಾಗಿತ್ತು. ಮಾತುಕತೆಯಿಂದ ಪರಸ್ಪರ ವಿಶ್ವಾಸ ಮತ್ತು ತಿಳಿವಳಿಕೆ ವೃದ್ಧಿಸಲು ಈ ಸಭೆ ಪೂರಕವಾಗಿತ್ತು ಎನ್ನುವುದನ್ನು ಉಭಯ ದೇಶಗಳು ಒಪ್ಪಿಕೊಂಡಿವೆ' ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
'ಮುಂಚೂಣಿಯಲ್ಲಿರುವ ಪಡೆಗಳು ಸಂಯಮ ಕಾಪಾಡುವಂತೆ ಪರಿಣಾಮಕಾರಿ ಪ್ರಯತ್ನಗಳನ್ನು ಕೈಗೊಳ್ಳಲು ಉಭಯ ದೇಶಗಳು ಒಪ್ಪಿವೆ. ಭಾರತ-ಚೀನಾ ಗಡಿಯ ಪಶ್ಚಿಮ ವಲಯದ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪರಿಸ್ಥಿತಿ ನಿಯಂತ್ರಣದಲ್ಲಿರುವಂತೆ ಕ್ರಮಗಳನ್ನು ಕೈಗೊಳ್ಳಲು ಮತ್ತು ಶಾಂತಿ ಕಾಪಾಡಲು ಒಪ್ಪಲಾಗಿದೆ' ಎಂದು ತಿಳಿಸಲಾಗಿದೆ.
ವಾಸ್ತವ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಿರುವ ಪೂರ್ವ ಲಡಾಖ್‌ನಲ್ಲಿ ಚೀನಾ ಸರಹದ್ದಿನಲ್ಲಿರುವ ಮೊಲ್ಡೊ ಗಡಿಯಲ್ಲಿ ಸುಮಾರು 16 ಗಂಟೆಗಳ ಕಾಲ ಸೇನಾ ಕಮಾಂಡರ್‌ಗಳ ಚರ್ಚೆ ನಡೆಯಿತು. ಭಾನುವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಿದ್ದ ಮಾತುಕತೆ, ಸೋಮವಾರ ಬೆಳಗಿನ ಜಾವ 2.30 ಗಂಟೆಗೆ ಮುಗಿದಿದೆ.
'10ನೇ ಸುತ್ತಿನ ಕಮಾಂಡರ್‌ಗಳ ಮಟ್ಟದ ಮಾತುಕತೆಯನ್ನು ಶೀಘ್ರದಲ್ಲಿ ನಡೆಸಲು ಸಹ ಒಪ್ಪಲಾಗಿದೆ.
ಪೂರ್ವ ಲಡಾಖ್‌ನ ಸಂಘರ್ಷ ನಡೆಯುವ ಸ್ಥಳಗಳಿಂದ ಸೇನಾ ತುಕಡಿಗಳನ್ನು ಯಾವ ರೀತಿ ವಾಪಸ್ ಕರೆಯಿಸಿಕೊಳ್ಳಬೇಕು ಎನ್ನುವ ಯೋಜನೆ ಕುರಿತು ಉಭಯ ದೇಶಗಳ ಕಮಾಂಡರ್‌ಗಳು ವಿಸ್ತೃತ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಭಾರತದ ಪರವಾಗಿ ಲೆಫ್ಟಿನೆಂಟ್ ಜನರಲ್ ಪಿಜೆಕೆ ಮೆನನ್ ಮತ್ತು ಚೀನಾದ ಪರವಾಗಿ ಮೇಜರ್ ಜನರಲ್ ಲಿಯು ಲಿನ್ ಮಾತುಕತೆಯಲ್ಲಿ ಭಾಗವಹಿಸಿದ್ದರು.