ಬದಿಯಡ್ಕ: ದೇಶದ ಮೂಲೆಮೂಲೆಗಳಲ್ಲಿ ಜಾತಿ ಮತ ಪಕ್ಷ ಬೇಧವಿಲ್ಲದೆ ಭಾರತೀಯರೆಲ್ಲರೂ ರಾಮಮಂದಿರ ನಿರ್ಮಾಣದಲ್ಲಿ ತೊಡಗಿಕೊಳ್ಳಬೇಕು. ರಾಮಮಂದಿರ ಕಟ್ಟುವ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವುದರಿಂದ ಜೀವನ ಸಾರ್ಥಕತೆಯನ್ನು ಕಾಣಲಿದೆ. ರಾಮಮಂದಿರ ಸಾಕಾರಗೊಳ್ಳುವುದರೊಂದಿಗೆ ಭಾರತವು ರಾಮರಾಜ್ಯವಾಗುವತ್ತ ಮುನ್ನುಗ್ಗುತ್ತಿದೆ. ಭಗವಂತನ ಈ ಕಾರ್ಯವು ನಮ್ಮೆಲ್ಲರ ಕರ್ತವ್ಯವೆಂಬುದಾಗಿ ತಿಳಿದು ಮಂದಿರ ನಿರ್ಮಾಣಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನವನ್ನು ನೀಡಿದರು.
ಭಾನುವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಧಿಸಮರ್ಪಣಾ ಅಭಿಯಾನದ ಬದಿಯಡ್ಕ ತಾಲೂಕು ಕಾರ್ಯಾಲಯವನ್ನು ದೀಪಬೆಳಗಿಸಿ ಉದ್ಘಾಟಿಸಿ ಸುವರ್ಣಮಂತ್ರಾಕ್ಷತೆಯನ್ನು ನೀಡಿ ಹರಸಿದರು.
ವಿಶ್ವಹಿಂದು ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲಶೆಟ್ಟಿ ಅರಿಬೈಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಿರಿಯರಾದ ಕೊಡುಗೈದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್, ವಿಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್, ವಿಎಚ್‍ಪಿ ಕಾರ್ಯಾಧ್ಯಕ್ಷ ಸಂಕಪ್ಪ ಭಂಡಾರಿ, ತಾಲೂಕು ಸಂಘಚಾಲಕ ಶಿವಶಂಕರ ಭಟ್ ಉಪಸ್ಥಿತರಿದ್ದರು. ಶ್ರೀಧರ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು. ರಮೇಶ್ ಕಳೇರಿ ಸ್ವಾಗತಿಸಿ, ನ್ಯಾಯವಾದಿ ಗಣೇಶ್ ಬದಿಯಡ್ಕ ವಂದಿಸಿದರು. ವಿಭಾಗ ಸಾಹಿತ್ಯ ಪ್ರಮುಖ್ ಅಶೋಕ್ ಬಾಡೂರು ದಿಕ್ಸೂಚಿ ಭಾಷಣ ಮಾಡಿದರು.