ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಕ್ಯಾಪಿಟಲ್‌ಗೆ ನುಗ್ಗಿ ಗುರುವಾರ ನಡೆಸಿದ ಹಿಂಸಾಚಾರದ ವೇಳೆ ಭಾರತದ ತ್ರಿವರ್ಣ ಧ್ವಜ ಕಾಣಿಸಿಕೊಂಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಟ್ರಂಪ್ ಬೆಂಬಲಿಗರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವ್ಯಕ್ತಿಯೊಬ್ಬರು ಪ್ರತ್ಯಕ್ಷರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನಿವಾಸಿ ಭಾರತೀಯರು ಟ್ರಂಪ್ ಪರ ನಡೆದ ದಾಂಧಲೆಯಲ್ಲಿ ಭಾಗಿಯಾಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಪ್ರತಿಭಟನೆಯಲ್ಲಿ ತ್ರಿವರ್ಣ ಧ್ವಜ ಕಾಣಿಸಿಕೊಂಡಿರುವುದಕ್ಕೆ ಬಹುತೇಕ ನೆಟ್ಟಿಗರು ಬೇಸರ ಮತ್ತು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಡಿಯೊ ಟ್ವೀಟ್ ಮಾಡಿರುವ ಬಿಜೆಪಿ ಮುಖಂಡ ವರುಣ್ ಗಾಂಧಿ, 'ಅಲ್ಲಿ ಭಾರತೀಯ ಧ್ವಜ ಏಕೆ ಇದೆ? ಇದು ಖಂಡಿತವಾಗಿಯೂ ನಾವು ಭಾಗವಹಿಸಲೇಬಾರದ ಒಂದು ಪ್ರತಿಭಟನೆಯಾಗಿದೆ' ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ, 'ಪ್ರತಿಭಟನೆ ವೇಳೆ ಭಾರತದ ಧ್ವಜವನ್ನು ಬೀಸಿದ ವ್ಯಕ್ತಿಗೆ ನಾಚಿಕೆಯಾಗಲಿ. ಬೇರೆ ದೇಶದಲ್ಲಿ ನಡೆಯುವ ಇಂತಹ ಹಿಂಸಾತ್ಮಕ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗವಹಿಸಲು ನಮ್ಮ ತ್ರಿವರ್ಣ ಧ್ವಜವನ್ನು ಬಳಸಬೇಡಿ' ಎಂದು ಟ್ವೀಟ್ ಮಾಡಿದ್ದಾರೆ.
ತ್ರಿವರ್ಣ ಧ್ವಜ ಕಾಣಿಸಿಕೊಂಡಿದ್ದರ ಬಗ್ಗೆ ಉಲ್ಲೇಖಿಸುತ್ತಾ ಮಾರ್ಮಿಕವಾಗಿ ಟ್ವೀಟ್ ಮಾಡಿರುವ ಹಾಸ್ಯನಟ ವೀರ್ ದಾಸ್, 'ಪ್ರತಿ ಸಾರಿ ದೊಡ್ಡ ಜನಸಮೂಹವೊಂದು ಸೇರಿದಾಗ, ಅದನ್ನು ಕ್ರಿಕೆಟ್ ಪಂದ್ಯವೆಂದು ಭಾವಿಸಬೇಕಿಲ್ಲ' ಎಂಬುದಾಗಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ಮಧ್ಯೆ ಅಮೆರಿಕ ಕ್ಯಾಪಿಟಲ್‌ಗೆ ನುಗ್ಗಿದ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಪೊಲೀಸರ ವಿರುದ್ಧ ಘರ್ಷಣೆಯಲ್ಲಿ ಭಾಗಿಯಾದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಹೇರಲಾಗಿದೆ.
ಜೋ ಬೈಡನ್ ಅವರ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆಯನ್ನು ಅಮೆರಿಕ ಕಾಂಗ್ರೆಸ್ ಗುರುವಾರ ಪೂರ್ಣಗೊಳಿಸಿದೆ. ಆ ಮೂಲಕ ಜೋ ಬೈಡನ್ ಅವರು ಅಮೆರಿಕದ 46ನೇ ಅಧ್ಯಕ್ಷರೆಂದು ದೃಢಪಡಿಸಲಾಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದ ಜೋ ಬೈಡನ್ 306 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದು ವಿಜಯಿಶಾಲಿಯಾಗಿದ್ದರು. ಅತ್ತ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 232 ಮತಗಳನ್ನು ಪಡೆದಿದ್ದರು.