ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸುವ ರೈತರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಭಾಗವಹಿಸಬೇಕಾಗಿದ್ದ ರೈತರ ಜೊತೆಗಿನ 'ಕಿಸಾನ್ ಮಹಾಪಂಚಾಯತ್' ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಕರ್ನಾಲ್ ಜಿಲ್ಲೆಯ ಕೈಮ್ಲಾ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ರೊಚ್ಚಿಗೆದ್ದ ರೈತರು ಮುಖ್ಯಮಂತ್ರಿ ಭೇಟಿ ಕೊಡುವ ಸ್ಥಳಕ್ಕೆ ನುಗ್ಗಿ ಕುರ್ಚಿಗಳನ್ನು ಎಸೆದು ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಳಿಕ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಿದರು. ಮುಖ್ಯಮಂತ್ರಿ ಹೆಲಿಕಾಪ್ಟರ್ ಮೂಲಕ ಇಳಿಯಬೇಕಾಗಿದ್ದ ಹೆಲಿಪ್ಯಾಡ್ ಅನ್ನು ಪ್ರತಿಭಟನಾ ನಿರತ ರೈತರು ಧ್ವಂಸಗೊಳಿಸಿದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳ ಪ್ರಯೋಜನಗಳ ಬಗ್ಗೆ ರೈತರನ್ನು ಉದ್ದೇಶಿಸಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸಂವಾದ ನಡೆಸಬೇಕಿತ್ತು. ರೈತರಿಂದ ವ್ಯಾಪಕ ಪ್ರತಿಭಟನೆ ಎದುರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ರೈತರಿಂದ ಪ್ರತಿಭಟನೆ ಎದುರಾಗುವ ಹಿನ್ನೆಲೆಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಬ್ಯಾರಿಕೇಡ್‌ಗಳೊಂದಿಗೆ ಸ್ಥಳದಲ್ಲಿ 1500ರಷ್ಟು ಪೊಲೀಸರನ್ನು ನಿಯೋಜಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಆಯೋಜಕರು ನಿನ್ನೆ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿದ್ದರು. ಅವರು ಸಾಂಕೇತಿಕ ಪ್ರತಿಭಟನೆ ನಡೆಸಲು ಒಪ್ಪಿಕೊಂಡಿದ್ದರು. ಅವರನ್ನು ನಂಬಿಕೊಂಡು ಆಯೋಜಕರು ಎಲ್ಲ ಸಿದ್ಧತೆಗಳನ್ನು ನಡೆಸಿದ್ದರು. ಆದರೆ ಕೆಲವು ಜನರು ಭರವಸೆ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ ಎಂದು ಹೇಳಿದ್ದಾರೆ.
ಅತ್ತ ಬಿಜೆಪಿ ಆಡಳಿತದ ಹರಿಯಾಣವು ರೈತರ ವಿರುದ್ಧ ದಬ್ಬಾಳಿಕೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.