ಮಧುರೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುರುವಾರದಂದು ತಮಿಳುನಾಡಿನ ಮಧುರೈಗೆ ಭೇಟಿ ನೀಡಿ ಪೊಂಗಲ್ ಹಬ್ಬದ ಪ್ರಯುಕ್ತ ನಡೆದ 'ಜಲ್ಲಿಕಟ್ಟು' ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಪಕ್ಷದ ಬೆಂಬಲವನ್ನು ಸೂಚಿಸಿದರು.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ದೃಷ್ಟಿಕೋನದಲ್ಲಿ ರಾಹುಲ್ ಗಾಂಧಿ ಭೇಟಿಯು ಹೆಚ್ಚಿನ ಮಹತ್ವವನ್ನು ಕೆರಳಿಸಿದೆ. ಹಿಂದೊಮ್ಮೆ ಜಲ್ಲಿಕಟ್ಟು ಕ್ರೀಡೆಯ ವಿರುದ್ಧವಾಗಿ ಸ್ವರವೆತ್ತಿದ್ದ ಕಾಂಗ್ರೆಸ್ ಈಗ ತಮಿಳುನಾಡು ಜನತೆಯ ಭಾವನೆಗಳಿಗೆ ಸ್ಪಂದಿಸುವ ಮೂಲಕ 'ಯೂ-ಟರ್ನ್' ಪಡೆದಿದೆ.
'ತಮಿಳು ಜನರ ಮೇಲೆ ಸವಾರಿ ಮಾಡಬಹುದು, ತಮಿಳು ಭಾಷೆ ಮತ್ತು ತಮಿಳು ಸಂಸ್ಕೃತಿಯನ್ನು ಕಡೆಗಣಿಸಬಹುದು ಎಂದು ಭಾವಿಸುವವರಿಗೆ ಸ್ಪಷ್ಟವಾದ ಸಂದೇಶ ನೀಡಲು ನಾನಿಲ್ಲಿಗೆ ಬಂದಿದ್ದೇನೆ' ಎಂದು ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು.
ಮಾತು ಮುಂದುವರಿಸಿದ ರಾಹುಲ್ ಗಾಂಧಿ, 'ತಮಿಳು ಸಂಸ್ಕೃತಿ ಮತ್ತು ಚರಿತ್ರೆಯು ಭಾರತದ ಭವಿಷ್ಯಕ್ಕೆ ಅವಶ್ಯಕವಾಗಿದ್ದು, ಗೌರವಿಸಬೇಕೆಂದು ಭಾವಿಸುತ್ತೇನೆ' ಎಂದು ಹೇಳಿದರು.
ಮಧುರೈನ ಅವನಿಯಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಜೊತೆಗೆ ರಾಹುಲ್ ಗಾಂಧಿ ವೇದಿಕೆ ಹಂಚಿಕೊಂಡರು. ಮುಂಬರುವ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಡಿಎಂಕೆ ಒಟ್ಟಾಗಿ ಎದುರಿಸುವ ಸಾಧ್ಯತೆಯಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟವು 38 ಸೀಟುಗಳ ಪೈಕಿ 31ರಲ್ಲಿ ಗೆಲುವು ದಾಖಲಿಸಿತ್ತು.
'ತಮಿಳು ಸಂಸ್ಕೃತಿ, ಇತಿಹಾಸವನ್ನು ನೋಡುವುದು ತುಂಬಾನೇ ಉತ್ತಮವಾದ ಅನುಭವವಾಗಿತ್ತು. ನಾನು ತಮಿಳುನಾಡಿನ ಜನರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಜಲ್ಲಿಕಟ್ಟು ಕ್ರೀಡೆಯನ್ನು ವ್ಯವಸ್ಥಿತ ಹಾಗೂ ಸುರಕ್ಷಿತವಾಗಿ ಆಯೋಜಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇಲ್ಲಿಗೆ ಹಲವು ಬಾರಿ ಬರಲಿದ್ದೇನೆ' ಎಂದು ರಾಹುಲ್ ಗಾಂಧಿ ತಿಳಿಸಿದರು.
ಇಲ್ಲಿ ಗಮನಾರ್ಹ ಅಂಶವೆಂದರೆ 2016ರ ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸುವುದಾಗಿ ಭರವಸೆ ನೀಡಿತ್ತು. ಬಳಿಕ ಜಲ್ಲಿಕಟ್ಟು ಕ್ರೀಡೆಯ ಸಂಬಂಧ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿ ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು.
2014ರಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಸುಪ್ರೀಂ ಕೋರ್ಟ್ ನಿಷೇಧವನ್ನು ಹೇರಿತ್ತು. ಬಳಿಕ ಭಾರಿ ಪ್ರತಿಭಟನೆ ಎದುರಾಗಿತ್ತು. ಮೂರು ವರ್ಷಗಳ ಬಳಿಕ ಪ್ರಾಣಿಗಳ ಮೇಲಿನ ಹಿಂಸೆಯನ್ನು ತಡೆಗಟ್ಟುವ ಸಂಬಂಧ ಕಾನೂನಿನಲ್ಲಿ ತಿದ್ದುಪಡಿಯೊಂದಿಗೆ ಪುನಃಸ್ಥಾಪಿಸಲಾಯಿತು.