ತಿರುವನಂತಪುರ: ನಿರಂತರ ಕೋವಿಡ್ ವ್ಯಾಕ್ಸಿನೇಶನ್‍ಗಾಗಿ ರಾಜ್ಯ ಸಜ್ಜಾಗಿರುವುದಾಗಿ ಕೇರಳ ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ. ಮೊದಲ ಹಂತದ ವ್ಯಾಕ್ಸಿನೇಶನ್ ಸಂಪೂರ್ಣ ಯಶಸ್ವಿಯಾಗಿದ್ದು, ಮುಂದಿನ ಹಂತಗಳಲ್ಲಿ ಕೋವಿಡ್ ವ್ಯಾಕಸಿನ್ ವಿತರಣೆಗಾಗಿ ಕೇಂದ್ರಗಳ ಸಜ್ಜೀಕರಣ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ 8062ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ವ್ಯಾಕ್ಸಿನೇಶನ್ ನಡೆಸಲಾಗಿದೆ. ವ್ಯಾಕ್ಸಿನ್ ಪಡೆದುಕೊಂಡವರಿಗೆ ಯಾವುದೇ ಅಡ್ಡಪರಿಣಾಮವುಂಟಾಗಿಲ್ಲ. ವ್ಯಾಕ್ಸಿನ್ ಸಂಬಂಧಿ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ನಿರ್ದೇಶಕ, ಆರೋಗ್ಯ ಶಿಕ್ಷಣ ನಿರ್ದೇಶಕ, ಮಲಬಾರ್ ಕ್ಯಾನ್ಸರ್ ಸೆಂಟರ್ ನಿರ್ದೇಶಕ, ಹೃದಯ ಶಸ್ತ್ರ ಚಿಕಿತ್ಸಾ ತಜ್ಞರ ಸಹಿತ ಪ್ರಮುಖರು ವ್ಯಾಕ್ಸಿನ್ ಸ್ವೀಕರಿಸಿದ್ದಾರೆ. ಮೊದಲ ಹಂತದ ಯಶಸ್ವಿಯ ಹಿನ್ನೆಲೆಯಲ್ಲಿ ಮುಂದಿನ ವ್ಯಾಕ್ಸಿನೇಶನನ್ನೂ ಇದೇ ರೀತಿ ವಿತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಾಗಿ ಸಚಿವೆ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ತಲಾ ನೂರು ಮಂದಿಯಂತೆ 133ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಿಸಲಾಗುವುದು. ನೋಂದಾವಣೆ ನಡೆಸಲಾದವರ ವ್ಯಾಕ್ಸಿನೇಶನ್ ಪೂರ್ತಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ಮೇಲ್ನೋಟದಲ್ಲಿ ಹೊಸ ಕೇಂದ್ರಗಳನ್ನು ತೆರೆಯಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿಗೆ ವ್ಯಾಕ್ಸಿನ್ ವಿತರಣೆಯಾದ ನಂತರ ಕೋವಿಡ್ ಮುಂಚೂಣಿ ಹೋರಾಟದಲ್ಲಿರುವ ಸದಸ್ಯರು, ಪೊಲೀಸರು, ಕೋವಿಡ್ ಮುಂಚೂಣಿ ಕಾರ್ಯಾಚರಣೆಯ ಕಂದಾಯ ಇಲಾಖೆ ಸಿಬ್ಬಂದಿ, ನಗರಸಭಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿಗೆ ವ್ಯಾಕ್ಸಿನ್ ವಿತರಿಸಲಾಗುವುದು. ಕಾಸರಗೋಡು ಜಿಲ್ಲೆಯಲ್ಲಿ ದ್ವಿತೀಯ ಹಂತದಲ್ಲಿ ಲಸಿಕೆ ನೀಡಿಕೆ ಸಂಬಂಧ ಈ 9 ಕೇಂದ್ರಗಳ ಸಹಿತ ಜಿಲ್ಲೆಯ 58 ಕೇಂದ್ರಗಳನ್ನು ಹಾಗೂ ಮೂರನೇ ಹಂತದಲ್ಲಿ ಜಿಲ್ಲೆಯಲ್ಲಿ 329 ಕೇಂದ್ರಗಳನ್ನುಆಯ್ಕೆಮಾಡಲಾಗಿದೆ.