ನವದೆಹಲಿ: ಜನರನ್ನು ಹಿಂಸಾಚಾರ, ಗಲಭೆಗೆ ಪ್ರಚೋದಿಸುವ ಟಿ.ವಿ. ಕಾರ್ಯಕ್ರಮಗಳು ಹಾಗೂ ಸುದ್ದಿಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಇದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಬಿಗಿಗೊಳಿಸಬೇಕು ಎಂದು ಹೇಳಿದೆ.
"ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಚೋದನೆ ತಡೆಗಟ್ಟುವುದು ಬಹುಮುಖ್ಯ ಸಂಗತಿ. ಆದರೆ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಯಾವುದೇ ಕೆಲಸ ಮಾಡಿಲ್ಲ" ಎಂದು ತರಾಟೆಗೆ ತೆಗೆದುಕೊಂಡಿದೆ.
"ನೈಜ ಹಾಗೂ ನ್ಯಾಯಯುತ ವರದಿಗಾರಿಕೆ ಸಮಸ್ಯೆಯಲ್ಲ. ಆದರೆ ಮತ್ತೊಬ್ಬರನ್ನು ಕೆರಳಿಸುವ ರೀತಿ ಆ ವರದಿ ಇದ್ದರೆ ದೊಡ್ಡ ತೊಂದರೆ" ಎಂದು ಎಸ್.ಎ. ಬೊಬ್ಡೆ, ಎಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠ ತಿಳಿಸಿದೆ.
ದೆಹಲಿಯಲ್ಲಿ ಕಳೆದ ವರ್ಷ ತಬ್ಲಿಘಿ ಜಮಾತ್ ಸಭೆ ಕುರಿತ ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಜಮೈತ್ ಉಲೇಮಾ ಐ ಹಿಂದ್, ಪೀಸ್ ಪಾರ್ಟಿ ಹಾಗೂ ಇನ್ನಿತರರು ಸಲ್ಲಿಸಿದ್ದ ಅರ್ಜಿಯ್ನು ಆಲಿಸಿದ ನ್ಯಾಯಾಲಯ ಈ ಸಂಬಂಧ ಸರ್ಕಾರ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಪ್ರಸರಣ ಸಂಸ್ಥೆಗೆ ನೋಟೀಸ್ ನೀಡಿದೆ. ಕೊರೊನಾ ಹಾಟ್ ಸ್ಪಾಟ್ ಎನಿಸಿಕೊಂಡಿದ್ದ ತಬ್ಲಿಘಿ ಜಮಾತ್ ಸಭೆ ವಿಷಯವನ್ನು ಕೆಲವು ಮಾಧ್ಯಮಗಳು ಕೋಮುವಾದವಾಗಿ ಪರಿವರ್ತಿಸಿವೆ ಎಂದು ಅರ್ಜಿದಾರರು ದೂರಿದ್ದರು.
ಆದರೆ ವಿಷಯ ಗಮನಕ್ಕೆ ಬರುತ್ತಿದ್ದಂತೆ ತಬ್ಲಿಘಿ ಸಭೆ ಕುರಿತ ಪ್ರಸಾರ ನಿಲ್ಲಿಸಿದ್ದಾಗಿ ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿದರೂ, "ಕೆಲವು ಕಾರ್ಯಕ್ರಮಗಳು ಜನರನ್ನು ಪ್ರಚೋದಿಸಿವೆ ಎಂಬುದು ಸತ್ಯ. ನೀವು ಈ ಬಗ್ಗೆ ಏನೂ ಮಾಡಿಲ್ಲ ಎಂದೂ ಸತ್ಯ. ಇದರಿಂದಲೂ ಪ್ರಚೋದನೆ ಸಿಗಬಹುದು" ಎಂದು ಬೊಬ್ಡೆ ತಿಳಿಸಿದ್ದಾರೆ. ಇದೇ ಸಂದರ್ಭ, ಸರ್ಕಾರ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಂತ್ರಕ ಕಾಯ್ದೆಯನ್ನು ಪರಿಷ್ಕೃತಗೊಳಿಸಬೇಕು ಎಂದು ತಿಳಿಸಿದ್ದಾರೆ.
ಕೆಲವು ಟಿವಿ ಚಾನೆಲ್ ಗಳ ಮೇಲೆ ಪ್ರಕರಣ ದಾಖಲಿಸಿದ್ದು, ಸುಪ್ರೀಂ ಕೋರ್ಟ್ ಸಂದೇಶವನ್ನು ಕೇಂದ್ರಕ್ಕೆ ರವಾನಿಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತಿಳಿಸಿದ್ದಾರೆ. "ಕೆಲವು ಕಾರ್ಯಕ್ರಮಗಳನ್ನು ನಿಯಂತ್ರಿಸಬಹುದು. ಅಂಥ ಎಷ್ಟೋ ಕಾರ್ಯಕ್ರಮಗಳನ್ನು ಸರ್ಕಾರ ನಿಯಂತ್ರಿಸಿದ್ದು, ಅದರ ಮಾಹಿತಿಯನ್ನೂ ನೀಡುತ್ತೇವೆ. ಆದರೆ ಲೈವ್ ಕಾರ್ಯಕ್ರಮಗಳಲ್ಲಿ ನಿಯಂತ್ರಣವೇ ಇಲ್ಲದಂತಾಗುತ್ತದೆ. ಒಬ್ಬರು ಪ್ರಚೋದನಕಾರಿಯಾಗಿ ಒಂದು ಹೇಳಿಕೆ ನೀಡಿದರೆ ಅದನ್ನು ತಡೆಯಲು ಸಾಧ್ಯವೇ ಇಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರದಲ್ಲಿ ಒಂದು ತಂಡವೂ ಇದ್ದು, ಇವುಗಳ ಮೇಲೆ ನಿಗಾ ವಹಿಸಿ ಕ್ರಮ ತೆಗೆದುಕೊಳ್ಳುತ್ತಿದೆ" ಎಂದು ವಿವರಿಸಿದರು.
"ಜನರು ಏನು ಹೇಳುತ್ತಿದ್ದಾರೆ ಅದನ್ನು ತಡೆಯಲು ನಮಗೆ ಆಸಕ್ತಿಯಿಲ್ಲ. ಆದರೆ ಕೆಲವು ಮಾಧ್ಯಮಗಳು ಕೋಮಿಗೆ ಕಾರಣವಾಗುವಂತೆ ಜನರನ್ನು ಪ್ರೇರೇಪಿಸುತ್ತಿವೆ. ಈಗಿನ ದಿನಗಳಲ್ಲಿ ಜನರು ಟಿ.ವಿಯಲ್ಲಿ ಏನು ಬೇಕಾದರೂ ಹೇಳಬಹುದು ಎನ್ನುವಂತಾಗಿದೆ" ಎಂದು ವಿಷಾದ ವ್ಯಕ್ತಪಡಿಸಿದರು.