ನವದೆಹಲಿ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳ ಜಾರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶದವರೆಗೆ ತಡೆಯಾಜ್ಞೆ ಜಾರಿಯಲ್ಲಿರಲಿದೆ ಎಂದು ಕೋರ್ಟ್ ಹೇಳಿದೆ.
ಆದರೆ, ರೈತ ಸಂಘಗಳೊಂದಿಗೆ ಉಂಟಾಗಿರುವ ಬಿಕ್ಕಟ್ಟು ಪರಿಹರಿಸಲು ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿಯ ಸದಸ್ಯರನ್ನು ಸಹ ಸುಪ್ರೀಂ ಕೋರ್ಟ್ ಆಯ್ಕೆ ಮಾಡಿದೆ. ಬಿ ಕೆ ಯು ಅಧ್ಯಕ್ಷ ಜಿತೇಂದರ್ ಸಿಂಗ್ ಮಾನ್, ಅಂತಾರಾಷ್ಟ್ರೀಯ ನೀತಿ ಮುಖ್ಯಸ್ಥ ಡಾ.ಪ್ರಮೋದ್ ಕುಮಾರ್ ಜೋಶಿ, ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಹಾಗೂ ಶಿವಕೇರಿ ಸಂಘಟನೆ ಮಹಾರಾಷ್ಟ್ರ ಅಧ್ಯಕ್ಷ ಅನಿಲ್ ಧನ್ವತ್ ಸಮಿತಿಯ ಸದಸ್ಯರಾಗಿದ್ದಾರೆ.
ಸುಪ್ರೀಂ ಕೋರ್ಟ್ ಸ್ಥಾಪಿಸಿರುವ ಸಮಿತಿಯು ಪರಿಶೀಲಿಸಬೇಕಾದ ಅಂಶಗಳ ಬಗ್ಗೆ ರೈತ ಸಂಘಗಳ ಮುಖಂಡರು ತೀರ್ಮಾನಿಸಲಿದ್ದಾರೆ. ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಸುಪ್ರೀಂ ಕೋರ್ಟ್ ಸಮಿತಿ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ.ಹೊಸ ಕೃಷಿ ಕಾಯ್ದೆಗಳ ಕುರಿತು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಕಾನೂನುಗಳನ್ನು ಆತುರಾತರವಾಗಿ ಜಾರಿಗೆ ತಂದಿಲ್ಲ, ದಶಕಗಳ ಕಾಲ ಮಾತುಕತೆಯ ಫಲಿತವಾಗಿ ಈ ಕಾಯ್ದೆಗಳು ರೂಪುಗೊಂಡಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಂಡಿದೆ. ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಕಳೆದ 40ಕ್ಕೂ ಹೆಚ್ಚುದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಅಂತ್ಯಗೊಳಿಸಲು, ಕೇಂದ್ರ ಸರ್ಕಾರ ಈವರೆಗೆ 8 ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪರಿಹಾರ ಲಭಿಸಿಲ್ಲ.
ಬಿಕ್ಕಟ್ಟು ಬಗೆಹರಿಯದ ಕಾರಣ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶಿದರೂ ತಾವು ಮಾತ್ರ ಪ್ರತಿಭಟನಾ ಪ್ರದೇಶಗಳನ್ನು ತೊರೆಯುವುದಿಲ್ಲ ಎಂದು ರೈತರು ಹೇಳಿದ್ದಾರೆ. ಗಣರಾಜ್ಯೋತ್ಸವ ದಿನದಂದು ಟ್ರಾಕ್ಟರ್ ಮೆರವಣಿಗೆ ನಡೆಯಲಿದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.