ಕಾಸರಗೋಡು: ನಕಲಿಮತದಾನಕ್ಕೆ ಯತ್ನಿಸಿದವರನ್ನು ತಡೆಯಲೆತ್ನಿಸಿದ ಚುನಾವಣಾಧಿಕಾರಿಗೆ ಜೀವಬೆದರಿಕೆಯೊಡ್ಡಿರುವ ಶಾಸಕ ಕೆ. ಕುಞÂರಾಮನ್ ಹಾಗೂ ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಣಿಕಂಠ ವಿರುದ್ಧ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಶಾಸಕರೇ ನಕಲಿಮತದಾನಕ್ಕೆ ಪ್ರೋತ್ಸಾಹ ನೀಡಿರುವುದಲ್ಲದೆ, ಅಧಿಕಾರಿಗೆ ಬೆದರಿಕೆಯೊಡ್ಡಿರುವ ಕ್ರಮ ಖಂಡನೀಯ. ಈ ಬಗ್ಗೆ ದೂರು ಲಭಿಸಿದ್ದರೂ ಕ್ರಮ ಕೈಗೊಳ್ಳಲು ಮುಂದಾಗದಿರುವ ಚುನಾವಣಾ ಆಯೋಗದ ಕ್ರಮ ಪ್ರಜಾಪ್ರಭುತ್ವದ ಅಣಕವಾಗಿದೆ. ಸಿಪಿಎಂ ಪಾರ್ಟಿ ಗ್ರಾಮಗಳಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿರುವುದಕ್ಕೆ ಚುನಾವಣಾಧಿಕಾರಿ ಕೆ.ಎಂ ಶ್ರೀಕುಮಾರ್ ಮೇಲಿನ ಬೆದರಿಕೆ ಸಾಕ್ಷಿಯಾಗಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವುದರ ಜತೆಗೆ ಶ್ರೀಕುಮಾರ್ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸರು ಮುಂದಾಗಬೇಕು ಎಂದೂ ಶ್ರೀಕಾಂತ್ ಒತ್ತಾಯಿಸಿದ್ದಾರೆ.