ತಿರುವನಂತಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್.ಡಿ.ಎಫ್ ಜಯಗಳಿಸಿದರೆ ಕಾಂಗ್ರೆಸ್ ಮುಕ್ತ ಭಾರತ ಎಂಬ ಮೋದಿ ಗುರಿ ಸಾಕ್ಷಾತದ್ಕಾರವಾಗುತ್ತದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ ಲೋಟ್ ಹೇಳಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಮಾಡಲು ಆರ್.ಎಸ್.ಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ಚುನಾವಣಾ ಪ್ರಚಾರವನ್ನು ಸಂಘಟಿಸಲು ಗೆಹ್ ಲೋಟ್ ಇಂದು ನೀಡಿದ ಭೇಟಿಯ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಗೆಹ್ ಲೋಟ್ ಅವರು ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಡಳಿತ ನಡೆಯನ್ನು ಟೀಕಿಸಿದರು. ಆರ್.ಎಸ್.ಎಸ್ ಮತ್ತು ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಹಾಳುಮಾಡಲು ಸಿಬಿಐ ಸೇರಿದಂತೆ ಏಜೆನ್ಸಿಗಳನ್ನು ಬಳಸುತ್ತಿವೆ. ಜಾಖರ್ಂಡ್ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರ ಉರುಳಿಸುವ ತಂತ್ರಗಾರಿಕೆ ನಡೆಯುತ್ತಿದೆ. ಮಣಿಪುರ ಮತ್ತು ಗೋವಾ ಸರ್ಕಾರಗಳನ್ನೂ ಉರುಳಿಸುವ ಬಗ್ಗೆಯೂ ಬಿಜೆಪಿ ಖಾರಸ್ಥಾನ ನಡೆಸುತ್ತಿದೆ ಎಂದು ಗಮನಸೆಳೆದರು.
ಈ ವೇಳೆ ರಾಜ್ಯ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮಾತನಾಡಿ, ಕೇಂದ್ರ ಸಂಸ್ಥೆಗಳ ಬಗ್ಗೆ ಅಶೋಕ್ ಗೆಹ್ ಲೋಟ್ ಮಾಡಿರುವ ಟೀಕೆ ಸರಿಯಾಗಿದೆ ಮತ್ತು ಕೇರಳದ ಪರಿಸ್ಥಿತಿ ವಿಭಿನ್ನವಾಗಿದೆ ಎಂದು ಹೇಳಿದರು. ಗೆಹ್ ಲೋಟ್ ಅವರ ಹೇಳೀಕೆಯನ್ನು ವಿರೂಪಗೊಳಿಸಬಾರದು ಎಂದು ಚೆನ್ನಿತ್ತಲ ಹೇಳಿದರು.
ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಪರಸ್ಪರ ಸಹಕರಿಸುತ್ತಿವೆ. ಕೇರಳದಲ್ಲಿ, ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತವು ಬದಲಾಗುತ್ತದೆ. ನಮ್ಮ ಹೋರಾಟ ಬಿಜೆಪಿ ವಿರುದ್ಧವಾಗಿದೆ. ಮೋದಿಯ ಗುರಿ ಕಾಂಗ್ರೆಸ್ ಮುಕ್ತ ಭಾರತ. ಕೇರಳದಲ್ಲಿ ಎಲ್‍ಡಿಎಫ್ ಗೆದ್ದರೆ ಮೋದಿಯ ಗುರಿ ಸಾಧಿಸಿದಂತಾಗುವುದು ಎಂದು ಗೆಹ್ ಲೋಟ್ ಅಭಿಪ್ರಾಯಪಟ್ಟರು.