ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ತಿರುವನಂತಪುರದ ಶ್ರೀ ಸತ್ಯಸಾಯಿ ಅನಾಥಾಶ್ರಮ ಟ್ರಸ್ಟ್ ಕಾಸರಗೋಡು ಜಿಲ್ಲೆಯ ಪೆರಿಯ ಕಾಟ್ಟುಮುಂಡದಲ್ಲಿ ನಿರ್ಮಿಸಿರುವ 45ಮನೆಗಳಲ್ಲಿ ಬಾಕಿ 23ಮನೆಗಳನ್ನು ಫಲಾನುಭವಿಗಳಿಗೆ ವಿತರಿಸದಿರುವ ಬಗ್ಗೆ ರಾಜ್ಯ ಮಾನವಹಕ್ಕು ಆಯೋಗ ಕಾಸರಗೋಡು ಜಿಲ್ಲಾಧಿಕಾರಿಗೆ ನೋಟೀಸು ರವಾನಿಸಿದೆ.
ಆಸ್ಪತ್ರೆ, ಆಟದ ಮೈದಾನ ಒಳಗೊಂಡಂತೆ ಟ್ರಸ್ಟ್ ಇಲ್ಲಿ ಒಂಬತ್ತು ಕೋಟಿ ರೂ. ವೆಚ್ಚದಲ್ಲಿ 2017ರಲ್ಲಿ 45ಮನೆಗಳನ್ನು ಎಂಡೋಸಲ್ಫಾನ್ ದುರಿತಬಾಧಿತರಿಗಾಗಿ ನಿರ್ಮಿಸಿದ್ದು, ಇವುಗಳಲ್ಲಿ 22ಮನೆಗಳ ಹಸ್ತಾಂತರ ನಡೆಸಲಾಗಿದೆ. ಆದರೆ ಮನೆ ಕೆಲಸ ಪೂರ್ತಿಗೊಂಡು ನಾಲ್ಕು ವರ್ಷ ಕಳೆದರೂ ಬಾಕಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸದಿರುವ ಬಗ್ಗೆ ಟ್ರಸ್ಟ್ ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ಸಲ್ಲಿಸಿತ್ತು. ಹಲವು ಮಂದಿ ಬಾಡಿಗೆ ಮನೆಯಲ್ಲಿ, ಇನ್ನು ಕೆಲವರು ರೋಗಿಗಳಾಗಿ ಕಾಲ ಕಳೆಯುತ್ತಿದ್ದಾರೆ. ಟ್ರಸ್ಟ್ ಮನೆ ನಿರ್ಮಾಣ ಪೂರ್ತಿಗೊಳಿಸಿದ್ದರೂ, ಇವುಗಳನ್ನು ಸಂತ್ರಸ್ತರಿಗೆ ನೀಡದಿರುವುದು ಮಾನವಹಕ್ಕಿನ ಉಲ್ಲಂಘನೆಯಾಗಿದ್ದು, ಕಾಸರಗೋಡು ಜಿಲ್ಲಾಧಿಕಾರಿ ಎಂಡೋಸಂತ್ರಸ್ತರಿಗೆ ತೋರುವ ಕಡು ವಂಚನೆಯಾಗಿದೆ ಎಂದು ಎಂಡೋಸಲ್ಫಾನ್ ಸಂತ್ರಸ್ತರ ಒಕ್ಕೂಟ ಕಾರ್ಯದರ್ಶಿ ಅಂಬಲತ್ತರ ಕುಞÂಕೃಷ್ಣನ್ ತಿಳಿಸಿದ್ದಾರೆ.
ಮನೆ ನಿರ್ಮಾಣ ಕಾರ್ಯ ಪೂರ್ತಿಗೊಂಡು ನಾಲ್ಕು ವರ್ಷ ಕಳೆದರೂ, ಇದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲು ಮುಂದಾಗದ ಜಿಲ್ಲಾಧಿಕಾರಿ ಕ್ರಮದ ವಿರುದ್ಧ ಮಾನವಹಕ್ಕು ಆಯೋಗಕ್ಕೆ ದೂರು ಸಲ್ಲಿಸಬೇಕಾಗಿ ಬಂದಿದೆ. ಈ ಬಗ್ಗೆ ಹೈಕೋರ್ಟಿಗೂ ದೂರು ಸಲ್ಲಿಸಲಾಗುವುದು ಎಂದು ಟ್ರಸ್ಟ್ ಸ್ಥಾಪಕ ಹಾಗೂ ಮುಖ್ಯ ನಿರ್ದೇಶಕ ಕೆ.ಎನ್ ಆನಂದ ಕುಮಾರ್"ವಿಜಯವಾಣಿ'ಗೆ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ನಿರ್ಮಿಸಲಾದ 36ಮನೆಗಳಲ್ಲಿ 22ಮನೆಗಳ ಕೀಲಿಕೈಯನ್ನು ಮುಖ್ಯಮಂತ್ರಿ ಫಲಾನುಭವಿಗಳಿಗೆ ಹಸ್ತಾಂತಾರಿಸಿದ್ದರು. ಎರಡನೇ ಹಂತದಲ್ಲಿ ನಿರ್ಮಿಸಿದ 0ಂಬತ್ತು ಮನೆಗಳ ಸಹಿತ 23ಮನೆಗಳ ಕಾಮಗಾರಿ ಪೂರ್ತಿಗೊಂಡಿದ್ದರೂ, ಹಸ್ತಾಂತರ ವಿಳಂಬವಾಗಿತ್ತು.
ಏನಂತಾರೆ:
ಕೆಲವೊಂದು ತಾಂತ್ರಿಕ ಕಾರಣಗಳಿಂದ ಮನೆಗಳ ಕೀಲಿಕೈ ಹಸ್ತಾಂತರ ವಿಳಂಬವಾಗಿದೆ. ಅಲೋಟ್‍ಮೆಂಟ್ ಪೂರ್ತಿಗೊಂಡಿದ್ದು, ಬಾಕಿ ಉಳಿದಿರುವ ಮನೆಗಳ ಕೀಲಿಕೈಯನ್ನು ಫಲಾನುಭವಿಗಳಿಗೆ ಶೀಘ್ರ ಹಸ್ತಾಂತರಿಸಲಾಗುವುದು.
ಡಾ. ಡಿ.ಸಜಿತ್‍ಬಾಬು, ಜಿಲ್ಲಾಧಿಕಾರಿ
ಕಾಸರಗೋಡು