ವಾಷಿಂಗ್ಟನ್: ಕ್ಯಾಪಿಟಲ್ ಗಲಭೆ ಪ್ರಕರಣದ ಬಳಿಕ ಭಾರಿ ಟೀಕೆಗೆ ಗುರಿಯಾಗಿರುವ ಡೊನಾಲ್ಡ್ ಟ್ರಂಪ್ ಗೆ ಮತ್ತೊಂದು ತೀವ್ರ ಹಿನ್ನಡೆಯಾಗಿದ್ದು ಟ್ರಂಪ್ ರ ಟ್ವಿಟರ್ ಖಾತೆಯನ್ನು ಶ್ವಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ.
ಈಗಾಗಲೇ ಸಾಮಾಜಿಕ ಜಾಲತಾಣ ಸಂಸ್ಥೆಗಳಿಂದ ನಿರ್ಬಂಧಕ್ಕೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಅಧಿಕೃತ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಸ್ಥಿಗಿತಗೊಳಿಸಲಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿನ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ ಎರಡು ದಿನಗಳ ಬಳಿಕ ಟ್ವಿಟ್ಟರ್ ಸಂಸ್ಥೆಯು ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. 'ಮತ್ತಷ್ಟು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಪಾಯ ಇರುವುದರಿಂದ' ಈ ಕ್ರಮ ತೆಗೆದುಕೊಂಡಿರುವುದಾಗಿ ಟ್ವಿಟರ್ ಹೇಳಿದೆ.
'ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಟ್ವೀಟ್‌ಗಳನ್ನು ಮತ್ತು ಅವುಗಳ ಸುತ್ತಲಿನ ಸಂದರ್ಭಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿದ ಬಳಿಕ, ಹಿಂಸಾಚಾರಕ್ಕೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯದ ಹಿನ್ನೆಲೆಯಲ್ಲಿ ನಾವು ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದೇವೆ' ಎಂದು ಟ್ವಿಟ್ಟರ್ ಸಂಸ್ಥೆ ಟ್ವೀಟ್ ಮಾಡಿದೆ.
ಕ್ಯಾಪಿಟಲ್ ಹಿಲ್ ಮೇಲೆ ಬೆಂಬಲಿಗರು ದಾಳಿ ಮಾಡಿದ ಬಳಿಕ ಟ್ರಂಪ್ ಅವರು ಅನೇಕ ಟ್ವೀಟ್‌ಗಳನ್ನು ಮಾಡಿದ್ದರು. ಅವುಗಳಲ್ಲಿ ಕೆಲವೊಂದು ಹಿಂಸಾಚಾರವನ್ನು ಕೆರಳಿಸುವ ಸ್ವರೂಪದಲ್ಲಿದ್ದ ಕಾರಣ ಟ್ವಿಟ್ಟರ್ ಅವುಗಳನ್ನು ಅಳಿಸಿಹಾಕಿತ್ತು. ಇನ್ನು ಟ್ರಂಪ್ ಟ್ವಿಟರ್ ಖಾತೆಗೆ 88 ಮಿಲಿಯನ್ ಹಿಂಬಾಲಕರಿದ್ದು, ಅವರ ಟ್ವೀಟ್‌ಗಳು ಜನರ ಮೇಲೆ ಪರಿಣಾಮ ಬೀರುವುದರಿಂದ ಅವರ ಖಾತೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಟ್ರಂಪ್ ಖಾತೆಯು ಮತ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಶಾಶ್ವತ ಸ್ಥಗಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಟ್ವಿಟರ್ ಎಚ್ಚರಿಕೆ ಕೂಡ ನೀಡಿತ್ತು. ಗುರುವಾರ ಟ್ರಂಪ್ ಟ್ವಿಟ್ಟರ್ ಖಾತೆ ಸಕ್ರಿಯಗೊಂಡಿತ್ತು. ಇಲ್ಲಿ ನೀಡುವ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಿದ್ದು, ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಯಾವುದೇ ಪ್ರಮಾದ ನಡೆದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವಿಟ್ಟರ್ ಹೇಳಿತ್ತು.