ಜೈಷ್ ಉಲ್ ಹಿಂದ್ ಸಂಘಟನೆ ಈ ಸ್ಫೋಟಕ್ಕೆ ಕಾರಣ ಎಂದು ಹೇಳಿಕೊಂಡಿದ್ದು, ಈ ಬಗ್ಗೆ ಮಾಹಿತಿ ರವಾನೆಯಾಗಿರುವ ಟೆಲಿಗ್ರಾಂ ಚಾಟ್ ಪರಿಶೀಲನೆಯಲ್ಲಿ ಕೇಂದ್ರ ತನಿಖಾ ಸಂಸ್ಥೆ ತೊಡಗಿಕೊಂಡಿದೆ. ಇಸ್ರೇಲ್ ರಾಯಭಾರ ಕಚೇರಿ ನಡೆಸಿದ ಈ ದಾಳಿ ಬಗ್ಗೆ ಸಂಘಟನೆ ಹೆಮ್ಮೆ ಪಟ್ಟುಕೊಂಡಿರುವುದಾಗಿಯೂ ತಿಳಿದುಬಂದಿದೆ. ತನಿಖಾ ಸಂಸ್ಥೆ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತವಾಗಿದೆ. ಸ್ಫೋಟಕ್ಕೆ ಕಾರಣವನ್ನೂ ಪತ್ತೆಹಚ್ಚಲಾಗುತ್ತಿದೆ.
ದೆಹಲಿಯ ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಎದುರು ಶುಕ್ರವಾರ ಲಘು ಸಾಮರ್ಥ್ಯದ ಐಇಡಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭಾರತ ಮತ್ತು ಇಸ್ರೇಲ್ ನಡುವಣ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 29ನೇ ವಾರ್ಷಿಕೋತ್ಸವದಂದೇ ಈ ಸ್ಫೋಟ ಸಂಭವಿಸಿದ್ದು, ಇದರ ಹಿಂದೆ ಅಲ್ ಖೈದಾ, ಐಎಸ್ ಐಎಸ್ ಸಂಘಟನೆ ಕೈವಾಡ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿತ್ತು.