ಬೆಂಗಳೂರು: ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಿಗೆ ಖರೀದಿಸಲು ಆಯ್ಕೆ ಮಾಡಿದ್ದ ಪುಸ್ತಕಗಳ ಪಟ್ಟಿಯಿಂದ ರಾಮ ಮಂದಿರ ಕುರಿತ ವಿವಾದಿತ ಪುಸ್ತಕವನ್ನು ಕೈಬಿಡಲಾಗಿದೆ.
ಡಾ ದೊಡ್ಡರಂಗೇಗೌಡ ನೇತೃತ್ವದ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ನಿನ್ನೆ ಈ ನಿರ್ಧಾರವನ್ನು ಘೋಷಿಸಿದೆ. 2018ರ ವರ್ಷಕ್ಕೆ ಸಮಿತಿಯು ಕೆ ಎಸ್ ಭಗವಾನ್ ಅವರು ಬರೆದ 'ರಾಮ ಮಂದಿರ ಏಕೆ ಬೇಕು' ಪುಸ್ತಕವನ್ನು ಆಯ್ಕೆ ಮಾಡಿಕೊಂಡಿತ್ತು. ರಾಮ ದೇವರನ್ನು ಋಣಾತ್ಮಕವಾಗಿ ಬಣ್ಣಿಸಿದ, ರಾಮನ ಬಗ್ಗೆ ವಿರುದ್ಧವಾಗಿ ಮಾತನಾಡಿದ ಭಗವಾನ್ ಅವರ ಪುಸ್ತಕವನ್ನು ಏಕೆ ಖರೀದಿಸಬೇಕು ಎಂದು ಬಲ ಪಂಥೀಯ ಸಂಘಟನೆಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
2018ರಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಸುಮಾರು 10 ಸಾವಿರದ 571 ಪುಸ್ತಕಗಳನ್ನು ಖರೀದಿಸಲು ಆಯ್ಕೆ ಮಾಡಲಾಗಿತ್ತು. ಈ ಸಂಬಂಧ ಕಳೆದ ವರ್ಷ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಸುಮಾರು 10 ಸಭೆಗಳನ್ನು ನಡೆಸಿ ಪುಸ್ತಕಗಳ ಪಟ್ಟಿಯನ್ನು ಅಖೈರುಗೊಳಿಸಲಾಗಿತ್ತು. ಕೊನೆಗೆ ಸಮಿತಿ 5,109 ಪುಸ್ತಕಳನ್ನು ಆಯ್ಕೆ ಮಾಡಿತ್ತು.
ಕಳೆದ ಡಿಸೆಂಬರ್ 10ರಂದು ನಡೆದ ಸಭೆಯಲ್ಲಿ ಕೆ ಎಸ್ ಭಗವಾನ್ ಅವರ ಪುಸ್ತಕವನ್ನು ಖರೀದಿಸುವ ಬಗ್ಗೆ ಮರು ಪರಿಶೀಲನೆ ಮಾಡಲಾಗಿತ್ತು. ಕೊನೆಗೆ ವಿವಾದ ಬಂದ ಹಿನ್ನೆಲೆಯಲ್ಲಿ ಸರ್ಕಾರ ಖರೀದಿಯಿಂದ ಹಿಂದೆ ಸರಿದಿದೆ.