ನವದೆಹಲಿ: ಏಷ್ಯಾದ ಅತಿದೊಡ್ಡ ಚಿಕನ್ ಮಾರ್ಕೆಟ್ ಆಗಿರುವ ಗಾಜಿಪುರದಲ್ಲಿ ಹಕ್ಕಿ ಜ್ವರ ಕುರಿತು ನಡೆಸಲಾದ ಎಲ್ಲಾ 100 ಮಾದರಿಗಳ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಪಶು ಸಂಗೋಪನಾ ಘಟಕ ಗುರುವಾರ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿನ ಕೆರೆಗಳು ಮತ್ತು ಪಾರ್ಕ್ ನಲ್ಲಿನ ಕಾಗೆಗಳು ಮತ್ತು ಬಾತುಕೋಳಿಗಳ ಸ್ಯಾಂಪಲ್ಸ್ ವರದಿಯಲ್ಲಿ ಹಕ್ಕಿಜ್ವರದ ಪಾಸಿಟಿವ್ ಬಂದ ಮೂರು ದಿನಗಳ ನಂತರ ಈ ಫಲಿತಾಂಶ ಬಂದಿದೆ.
ಇದರಿಂದಾಗಿ ನಗರದ ಹೊರಗಿನಿಂದ ತಂದ ಸಂಸ್ಕರಿಸಿದ ಮತ್ತು ಪ್ಯಾಕೇಜ್ ಮಾಡಿದ ಕೋಳಿ ಮಾರಾಟವನ್ನು ದೆಹಲಿ ಸರ್ಕಾರ ಸೋಮವಾರ ನಿರ್ಬಂಧಿಸಿತು. ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಮುಂದಿನ 10 ದಿನಗಳ ಕಾಲ ಪೂರ್ವ ದೆಹಲಿಯ ಚಿಕನ್ ಮಾರುಕಟ್ಟೆಯನ್ನು ಮುಚ್ಚಿದೆ. ದೆಹಲಿ- ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರ ಮಾರ್ಕೆಟ್, ಚಿಕನ್, ಮೊಟ್ಟೆ ಹಾಗೂ ಮಾಂಸ ಮಾರಾಟದ ಪ್ರಮುಖ ಸ್ಥಳವಾಗಿದೆ.
ಗಾಜಿಪುರ ಮಾರ್ಕೆಟ್ ನಲ್ಲಿ 35 ಕೋಳಿಗಳಿಂದ ಸಂಗ್ರಹಿಸಲಾದ 100 ಸ್ಯಾಂಪಲ್ಸ್ ವರದಿಯಲ್ಲಿ ಹಕ್ಕಿಜ್ವರದ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಹೈನುಗಾರಿಕೆ ಘಟಕದ ಹಿರಿಯ ಅಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ ಹರಡುತ್ತಿಲ್ಲ ಎಂಬುದು ಇದರಿಂದ ಅರ್ಥವಾಗಿದೆ. ಆದಾಗ್ಯೂ, ನಾಲ್ಕು ಮಾದರಿಗಳಲ್ಲಿ ಶಂಕೆ ವ್ಯಕ್ತವಾಗಿದ್ದು, ಸ್ಪಷ್ಟತೆಗಾಗಿ ಭೂಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.