ಕೊರೊನಾ ಸೋಂಕಿನ ಮೂಲ ಪತ್ತೆಗಾಗಿ ಆರೋಗ್ಯ ಸಂಸ್ಥೆಯ 10 ಅಂತಾರಾಷ್ಟ್ರೀಯ ತಜ್ಞರ ತಂಡ ಭೇಟಿ ನೀಡಿದ್ದು, ಶುಕ್ರವಾರ ಹೋಟೆಲ್ ನಲ್ಲಿ ಚೀನಾ ಅಧಿಕಾರಿಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಸದಸ್ಯರು ಮೊದಲ ಬಾರಿ ಮುಖಾಮುಖಿ ಭೇಟಿಯಾಗಿದ್ದಾರೆ.
2019ರ ಡಿ.27ರಂದು ವುಹಾನ್ ನಲ್ಲಿ ಮೊದಲ ಕೊರೊನಾ ಸೋಂಕು ಪತ್ತೆಯಾಗಿದ್ದು, ಆ ಸೋಂಕು ಪತ್ತೆಯಾದ ಡಾ. ಝಾಂಗ್ ಜಿಕ್ಸಿಯನ್ ಅವರಿಗೆ ವುಹಾನ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇಂದು ಆ ಆಸ್ಪತ್ರೆಗೆ ತಜ್ಞರು ಭೇಟಿ ನೀಡಲಿದ್ದಾರೆ. ಜೊತೆಗೆ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾದವರನ್ನು ಹಾಗೂ ಅಲ್ಲಿನ ಮಾರುಕಟ್ಟೆಗಳನ್ನು ಪರಿಶೀಲನೆ ಮಾಡಲಿರುವುರು ಎಂದು ತಿಳಿದುಬಂದಿದೆ.
ಈ ಸೋಂಕಿನ ಮೂಲದ ಪತ್ತೆ ಹಚ್ಚಲು ವರ್ಷಗಟ್ಟಲೆ ಹಿಡಿಯಬಹುದು. ಪ್ರಾಣಿಗಳಿಂದ ಈ ಸೋಂಕು ಬಂದಿದೆ ಎಂದು ಹೇಳುತ್ತಿರುವುದರಿಂದ ಪ್ರಾಣಿಗಳ ಮಾದರಿಯನ್ನು ಸಂಗ್ರಹಿಸಿ ವಂಶವಾಹಿ ಪರಿಶೀಲನೆ ನಡೆಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದೀಗ ತಜ್ಞರ ಚಿತ್ತ, ನಗರದಲ್ಲಿನ ರೋಗ ಸೂಕ್ಷ್ಮಾಣು ವೈಜ್ಞಾನಿಕ ಅಧ್ಯಯನ ಕೇಂದ್ರದ ಮೇಲೆ ನೆಟ್ಟಿದೆ. ಅಲ್ಲಿಂದಲೇ ಸೋಂಕು ಆರಂಭವಾಗಿದ್ದು ಎಂಬ ಕೆಲ ಆರೋಪಗಳು ಈ ಹಿಂದೆ ಕೇಳಿಬಂದಿದ್ದು, ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಯತ್ನದಲ್ಲಿ ತಜ್ಞರಿದ್ದಾರೆ.
ಚೀನಾದಲ್ಲಿ ಸೋಂಕು ಪತ್ತೆಯಾದಾಗಿನಿಂದ ಇದುವರೆಗೂ 4,600 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.